ಲಕ್ನೋ: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಸಿಕಂದ್ರದ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳನ್ನು ಮುನೇಶ್ ಮತ್ತು ಸಿಂಟು ಎಂದು ಗುರುತಿಸಲಾಗಿದೆ.
ಟ್ರಕ್ ಮೈನ್ಪುರಿ ಮೂಲದ ಆಟೋ-ಶೋ ರೂಂಗೆ ಬೈಕ್ಗಳನ್ನು ತೆಗೆದುಕೊಂಡು ಗುರುಗ್ರಾಮ್ಗೆ ಹೋಗುತ್ತಿತ್ತು. ಆದರೆ ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಾದಚಾರಿ ಮಾರ್ಗದಲ್ಲಿ ಹೋಗಿದೆ. ಅಲ್ಲಿ ಏಳು ಮಂದಿ ಕಾರ್ಮಿಕರು ಮಲಗಿದ್ದರು. ಅವರ ಮೇಲೆ ಹರಿದಿದೆ. ಪರಿಣಾಮ ಐವರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದರು.