ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಯೋಜನೆ ಮಾಡಿದವರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಸಂಬಂಧ ಚರ್ಚೆಗೆ ಅವರು ಉತ್ತರಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ಪ್ರಗತಿಶೀಲ ರಾಜ್ಯ ಇದನ್ನು ಲಘುವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಆದ ಮೇಲೆ ಕ್ರಮ ಕೈಗೊಳ್ಳುವುದು ಅದು ಬಹಳ ಮುಖ್ಯವಾಗಿದೆ. ಐಪಿಎಲ್ನ್ನು ಕ್ರೀಡೆಯೂ ಆಗಬೇಕು, ಮನರಂಜನೆಯನ್ನೂ ಕೊಡಬೇಕು, ಜೊತೆಗೆ ಹಣವೂ ಬರಬೇಕು ಎಂಬ ಪರಿಕಲ್ಪನೆಯಲ್ಲಿ ಆರಂಭಿಸಲಾಗಿದೆ. ಈ ಐಪಿಎಲ್ನಲ್ಲಿ ಸುಮಾರು 15 ಬಿಲಿಯನ್ ಡಾಲರ್ ಆದಾಯ ಸಿಗುತ್ತಿದೆ. ಐಪಿಎಲ್ ಹಣದ ದೃಷ್ಟಿಕೋನದಿಂದ ಆಗುತ್ತಿದೆಯೇ, ಹೊರತು ಕ್ರೀಡೆಯಾಗಿ ಆಗುತ್ತಿಲ್ಲ ಎಂದರು.
ಕಾಲ್ತುಳಿತ ಪ್ರಕರಣ ಒಂದು ಬ್ಲ್ಯಾಕ್ ಡೇ ಆಗಿದೆ. ಆ ಘಟನೆಯಿಂದ ಬಹಳ ನೋವಾಗುತ್ತದೆ. ನಮ್ಮ ಸ್ವಂತ ಮನೆಗಳಲ್ಲಿ ಸಾವಿಗೀಡಾದಾಗ ಏನು ನೋವಾಗುತ್ತದೆಯೋ, ಅದಕ್ಕಿಂತ ಹೆಚ್ಚಿನ ನೋವಾಗಿದೆ. ಹೀಗಾಗಿ, ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ಮೇಲೆ ಎಫ್ಐಆರ್ ದಾಖಲು ಮಾಡಿದೆವು. ಆರ್ಸಿಬಿ ತಂಡ ಫೈನಲ್ ಪಂದ್ಯ ಆಡುತ್ತಿರುವಾಗಲೇ ಮೇ 29ರಂದು ಏನು ಮಾಡಬೇಕು ಎಂದು ಚರ್ಚೆ ಮಾಡಿ, ಬೆಂಗಳೂರಿಗೆ ಬಂದು ಕೆಎಸ್ಸಿಎ ಜೊತೆ ಚರ್ಚಿಸಿ ಸಂಭ್ರಮಾಚರಣೆಗೆ ತೀರ್ಮಾನಿಸಿದ್ದರು. ಮ್ಯಾಜಿಸ್ಟೀರಿಯಲ್ ತನಿಖೆಯಲ್ಲೂ, ಆಯೋಗದಲ್ಲೂ ಕೆಲ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. ಕಾಲ್ತುಳಿತ ಆಗುತ್ತೆ ಅಂತ ಯಾರೂ ಮೊದಲೇ ಊಹೆ ಮಾಡಲಾಗುವುದಿಲ್ಲ. ದೇಶದಲ್ಲಿ ಅನೇಕ ಕಡೆ ಕಾಲ್ತುಳಿತ ಆಗಿದೆ. ಹಾಗಂತ ನಾನು ಅದನ್ನು ಸಮರ್ಥನೆ ಮಾಡುತ್ತಿಲ್ಲ ಎಂದು ತಿಳಿಸಿದರು.