ವಿಜಯನಗರ: ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನು ತಾನೇ ತಡೆದ ಘಟನೆ ಜಿಲ್ಲೆಯ ಹಗರಿಬೊಮ್ಮನ ತಾಲೂಕಿನಲ್ಲಿ ನಡೆದಿದೆ.
ಆ ಒಂದು ಪೋನ್ ಕರೆ ಮೂಲಕ ಇಡೀ ತಾಲೂಕಿನ ಆಡಳಿತವನ್ನು ಆ ಬಾಲಕಿ ಮನೆಗೆ ಬರುವಂತೆ ಮಾಡಿದೆ. ಧೈರ್ಯ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆ ಮದುವೆ ನಿಂತಿದ್ದಲ್ಲದೇ, ಉನ್ನತ ವ್ಯಾಸಂಗಕ್ಕೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದ ಬಾಲ್ಯ ವಿವಾಹದ ಕತೆ ಇಲ್ಲಿದೆ ನೋಡಿ.
SSLCಯಲ್ಲಿ 94 ಪರ್ಸೆಂಟೇಜ್ ಮಾರ್ಕ್ ಬಂದರೂ ಮುಂದೆ ಓದಲು ಬಿಡದ ಪೋಷಕರನ್ನು ಅಧಿಕಾರಿಗಳು ಮನವೊಲಿಸಿದ್ದಾರೆ. ಹಗರಿಬೊಮ್ಮನ ಹಳ್ಳಿಯ ಬಾಲಕಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 94ರಷ್ಟು ಅಂಕ ಪಡೆದು ಉನ್ನತ ವ್ಯಾಸಂಗದ ಕನಸು ಕಂಡಿದ್ದಳು. ಆದರೆ, ಬಡತನದ ಹಿನ್ನೆಲೆ ತಂದೆ, ತಾಯಿ ಮಗಳ ಮದುವೆ ಮಾಡಲು ನಿರ್ಧಾರ ಮಾಡಿದ್ದರು. ಮದುವೆ ಮಾಡಲು ತಯಾರಿ ಮಾಡಿಕೊಂಡು ಹಣ್ಣುಕಾಯಿ ಇಡೋ ಶಾಸ್ತ್ರ ಕೂಡ ಮಾಡಿದ್ದರು.
ಮದುವೆಗೆ 1 ತಿಂಗಳು ಬಾಕಿ: ಇನ್ನೇನು ಇನ್ನೊಂದು ತಿಂಗಳಲ್ಲಿ ಮದುವೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾರೆ. ಆಗ ಬಾಲಕಿ ಸ್ನೇಹಿತರ ಸಹಾಯದಿಂದ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಪೋಷಕರು ಬಾಲ್ಯ ವಿವಾಹ ಮಾಡುತ್ತಿದ್ದಾರೆ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾಳೆ. ಕೂಡಲೇ ಬಾಲಕಿ ಮನೆಗೆ ಇಡೀ ತಾಲೂಕಿನ ಅಧಿಕಾರಿಗಳು ಬಂದಿದ್ದಾರೆ.
ಪೋಷಕರಿಗೆ ತಿಳಿ ಹೇಳಿದ ಅಧಿಕಾರಿಗಳು: ತಹಶೀಲ್ದಾರರು, ಶಿಶು ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರ ತಂಡ ಪೋಷಕರ ಮನವೊಲೈಸಿದ್ದಾರೆ. ಬಾಲ್ಯ ವಿವಾಹ ಅಪರಾಧ ಮಾತ್ರವಲ್ಲದೇ ನಿಮ್ಮ ಮಗಳ ಮಾನಸಿಕ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಿಳಿಹೇಳುವ ಮೂಲಕ ಮದುವೆಗೆ ಅಂತ್ಯ ಹಾಡಿದ್ದಾರೆ.
ಬಾಲಕಿಗೆ ಕಾಲೇಜು, ವಸತಿ ನಿಲಯ ವ್ಯವಸ್ಥೆ: ಹೆಣ್ಣು ಮಕ್ಕಳು ಭಾರವಲ್ಲ ಅವರಿಗೆ ಕೂಡ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡುವಂತೆ ಪೋಷಕರಿಗೆ ತಿಳಿ ಹೇಳಿದ ಬಳಿಕ ಮದುವೆ ವಿಚಾರವನ್ನು ಪೋಷಕರು ಬಿಟ್ಟಿದ್ದಾರೆ. ಆದರೆ, ಬಡತನ ಹಿನ್ನೆಲೆ ಮುಂದೆ ಓದಿಸಲು ಆಗದ ಹಿನ್ನೆಲೆ ಪೋಷಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆಗ ಬಾಲಕಿಯ ವಿದ್ಯಾಭ್ಯಾಸದ ಜವಾಬ್ದಾರಿ ತಾಲೂಕು ಆಡಳಿತದ್ದು ಎಂದು ಹೇಳಿ ಕೂಡಲೇ ಕಾಲೇಜೊಂದರಲ್ಲಿ ಸೇರಿಸಿ ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ಬಾಲಕಿ ತನ್ನ ಬಾಲ್ಯ ವಿವಾಹವನ್ನು ತಡೆಯಲು ತಾನೇ ಪ್ರಮುಖ ಪಾತ್ರವಹಿಸಿರೋದು ವಿಶೇಷವಾಗಿದೆ. ಕದ್ದಮುಚ್ಚಿ ಅದೆಷ್ಟೋ ಕಡೆಗಳಲ್ಲಿ ಈ ರೀತಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿವೆ. ಆದರೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಲಕಿ ಮಾದರಿಯಲ್ಲಿ ಧೈರ್ಯ ಮಾಡಿದರೆ, ಬಾಲ್ಯವಿವಾಹ ಸಂಪೂರ್ಣ ತಡೆಗಟ್ಟಬಹುದಾಗಿದೆ. ನಿಜಕ್ಕೂ ಬಾಲಕಿಯ ಧೈರ್ಯ ಸಾಕಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿ..
ಬಾಲಕಿ ಹೇಳಿಕೆ: “ತಹಶೀಲ್ದಾರ್ ಮೇಡಂ ‘ಅಪ್ಪ ಅಮ್ಮನನ್ನು ಯಾಕೆ ನಿನ್ನನ್ನು ಶಾಲೆ ಬಿಡಿಸಿದರಮ್ಮಾ’ ಎಂದು ಕೇಳಿದರು. ಅದಕ್ಕೆ ನಾನು ‘ನನ್ನ ಅಪ್ಪ ಅಮ್ಮ ನಮ್ಮ ಮನೆಯಲ್ಲಿ ಬಡತನ ಇದೆ, ಮದುವೆಯಾಗು ಎಂದು ಹೇಳಿದ್ದರು’ ಎಂದು ತಿಳಿಸಿದೆ. ಆಗ ತಹಶೀಲ್ದಾರ್ ಮೇಡಂ ಅವರು ನನ್ನ ಪೋಷಕರಿಗೆ ‘ಇಲ್ಲಪ್ಪ ಓದಿಸಿ ಅವಳನ್ನು. ಅವಳೂ ಕೂಡ ಗಂಡು ಮಗ ಇದ್ದ ಹಾಗೇ ಅಂತ ತಿಳಿದುಕೊಂಡು ಓದಿಸಿ. ಈಗಾಗಲೇ ವಿಧ್ಯಾಭ್ಯಾಸ ಚೆನ್ನಾಗಿ ಮಾಡಿದ್ದಾಳೆ. ಮುಂದಕ್ಕೆ ಓದಬಹುದು. ಗಂಡು ಮಕ್ಕಳು ಹೆಣ್ಣು ಮಕ್ಕಳು ಎಲ್ಲರೂ ಸಮಾನರಿದ್ದ ಹಾಗೇ’ ಎಂದು ತಿಳಿ ಹೇಳಿದರು. ಅದಕ್ಕೆ ನನ್ನ ಪೋಷಕರು ಅರ್ಥ ಮಾಡಿಕೊಂಡು ‘ಹೂ.. ಓದಿಸುತ್ತೇವೆ’ ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ ನನ್ನ ಮುಂದಿನ ವಿಧ್ಯಭ್ಯಾಸಕ್ಕಾಗಿ ಕಾಲೇಜು ವ್ಯವಸ್ಥೆ ಕೂಡ ಮಾಡಿದ್ದಾರೆ. ಅವರಿಗೆ ತುಂಬಾ ತುಂಬಾ ಧನ್ಯವಾದಗಳು” ಎಂದು ಬಾಲಕಿ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.