ಈ ಬಾರಿ 11 ದಿನ ನವರಾತ್ರಿ ಆಚರಣೆ:
ಮೈಸೂರು: ನಾಡಹಬ್ಬ ದಸರಾ ವೇಳೆ ಅರಮನೆಯ ಒಳಗೆ ರಾಜವಂಶಸ್ಥರು ಸಾಂಪ್ರದಾಯಿಕವಾಗಿ ನೆರವೇರಿಸುವ ನವರಾತ್ರಿ ಪೂಜಾ ಕೈಂಕರ್ಯಗಳು ತನ್ನದೇ ಆದ ಪರಂಪರೆ ಹೊಂದಿವೆ.
ನವರಾತ್ರಿ ಸಂದರ್ಭದಲ್ಲಿ ಅರಮನೆಯಲ್ಲಿ ರಾಜವಂಶಸ್ಥರ ಚಿನ್ನದ ಸಿಂಹಾಸನ ಪೂಜೆ, ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ರತ್ನಖಚಿತ ಆಯುಧಗಳಿಗೆ ಆಯುಧ ಪೂಜೆ ಜೊತೆಗೆ ವಿಜಯದಶಮಿ ಪೂಜೆಗಳು ಪ್ರಮುಖ ಧಾರ್ಮಿಕ ಪೂಜಾ ಕೈಂಕರ್ಯಗಳಾಗಿವೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಯದುವೀರ್ ಒಡೆಯರ್ ಅವರು ಈ ಪೂಜೆಗಳನ್ನು ನೆರವೇರಿಸಲಿದ್ದಾರೆ. ಈ ಬಾರಿಯ ನವರಾತ್ರಿ 11 ದಿನ ಬಂದಿರುವುದು ವಿಶೇಷ.
ಹಾಗೆಯೇ ರಾಜವಂಶಸ್ಥರು ನಡೆಸುವ ಶರನ್ ನವರಾತ್ರಿಯ ಪೂಜೆಗಳೂ ಸಹ ಮಹತ್ವ ಪಡೆದುಕೊಂಡಿವೆ. ಪ್ರತಿ ವರ್ಷದಂತೆ ಮೈಸೂರಿನ ರಾಜವಂಶಸ್ಥರು ಅರಮನೆಯ ಪಂಚಾಂಗ, ಒಂಟಿಕೊಪ್ಪಲಿನ ಪಂಚಾಂಗ ಹಾಗೂ ಮೇಲುಕೋಟೆಯ ಪಂಚಾಂಗಗಳನ್ನು ಆಧರಿಸಿ ತಮ್ಮ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಸಹ ಅದೇ ರೀತಿಯ ಪೂಜಾ ಕೈಂಕರ್ಯಗಳ ದಿನಾಂಕ ನಿಗದಿ ಮಾಡಲಾಗಿದೆ.
ಪೂಜಾ ಕೈಂಕರ್ಯಗಳು ನಿಗದಿ:
- ಸೆಪ್ಟೆಂಬರ್ 22ರಂದು ನವರಾತ್ರಿ ಆರಂಭ. ಬೆಳಿಗ್ಗೆ 10ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾಗೆ ಚಾಲನೆ. ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಪೂಜೆ ಹಾಗೂ ಖಾಸಗಿ ದರ್ಬಾರ್.
- ಸೆ.23ರಂದು ಬ್ರಹ್ಮಚಾರಿಣಿ ಪೂಜೆ
- ಸೆ.24ರಂದು ಚಂದ್ರಘಾಟ ಪೂಜೆ
- ಸೆ.25ರಂದು ಕೂಷ್ಮಂಡ ಪೂಜೆ
- ಸೆ.26ರಂದು ಸ್ಕಂದಮಾತಾ ಪೂಜೆ
- ಸೆ.27ರಂದು ಕಾತ್ಯಾಯಿನಿ
- ಸೆ.28ರಂದು ಸಿದ್ಧಧಾತ್ರೀ
- ಸೆ.29ರಂದು ಬೆಳಿಗ್ಗೆ ಸರಸ್ವತಿ ಪೂಜೆ, ರಾತ್ರಿ ಕಾಳರಾತ್ರಿ ಪೂಜೆಯ ಜೊತೆಗೆ ಮಹಿಷಾಸುರ ಸಂಹಾರ
- ಸೆ.30ರಂದು ದುರ್ಗಾಷ್ಟಮಿ
- ಅಕ್ಟೋಬರ್ 1ರಂದು ಆಯುಧ ಪೂಜೆ
- ಅ.2ರಂದು ವಿಜಯದಶಮಿ ಪೂಜೆ
- ಅ.6ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ರಥೋತ್ಸವ ನೆರವೇರಲಿದ್ದು, ಈ ಮೂಲಕ ಅರಮನೆಯ ಶರನ್ ನವರಾತ್ರಿ ಪೂಜೆಗಳು ಸಂಪನ್ನಗೊಳ್ಳಲಿವೆ.