ಬೆಳಗಾವಿ: ಗ್ರಾಮದೇವಿಗೆ ಜಾತ್ರೆಯ ಸಂಭ್ರಮ.. ಎಲ್ಲಿ ನೋಡಿದರೂ ಜನಸಾಗರ.. ಕಣ್ಮನ ಸೆಳೆವ ಅದ್ಧೂರಿ ಜೋಡು ರಥೋತ್ಸವ.. ಅಲಂಕಾರಗೊಂಡು ಕಂಗೊಳಿಸುತ್ತಿರುವ ನೂತನ ಲಕ್ಷ್ಮೀ ದೇವಿ ದೇವಸ್ಥಾನ.. ಮುಗಿಲೆತ್ತರಕ್ಕೆ ಚಿಮ್ಮಿದ ಭಕ್ತಿಯ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ.
ಹೌದು, ಇಂತಹ ಅದ್ಭುತ ದೃಶ್ಯಗಳಿಗೆ ಸಾಕ್ಷಿ ಆಗಿದ್ದು, ಕರದಂಟು ನಾಡು ಗೋಕಾಕದ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆ. ಕಳೆದ ಜೂ.30 ರಿಂದ ಆರಂಭವಾಗಿರುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿದೆ. ಹೀಗಾಗಿ, ಗೋಕಾಕದ ಮನೆ ಮನೆಯಲ್ಲೂ ಜಾತ್ರೆ ಸಂಭ್ರಮ ಕಳೆಗಟ್ಟಿದೆ.
ಎಲ್ಲಿ ನೋಡಿದ್ರೂ ದ್ಯಾಮವ್ವ, ದುರ್ಗವ್ವ ದೇವಿಯರ ಆರಾಧನೆ ಕಂಡುಬರುತ್ತಿದೆ. ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅದ್ದೂರಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಮಂಗಳವಾರ (ಜು.8ರಂದು) ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಈವರೆಗೆ 10ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿರುವುದು ದಾಖಲೆಯೇ ಸರಿ.
ಹತ್ತು ವರ್ಷಗಳ ನಂತರ ನಡೆದ ಈ ಅದ್ಧೂರಿ ಜಾತ್ರೆಯು ನಿಜಕ್ಕೂ ಐತಿಹಾಸಿಕ, ಅವಿಸ್ಮರಣೀಯ ಹಾಗೂ ವರ್ಣನಾತೀತ. ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲಿಯೇ ಈ ಬಾರಿ ಗೋಕಾಕ್ ಜಾತ್ರೆ ಗಮನ ಸೆಳೆದಿದೆ. ಪ್ರತಿದಿನ ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಗೆ ಸಾಕ್ಷಿಯಾಗುತ್ತಿದ್ದಾರೆ.ಗೋಕಾಕ್ ಗ್ರಾಮದೇವಿ ಜಾತ್ರೆ ಹಲವು ವಿಶೇಷತೆಗಳನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷವೂ ಲಕ್ಷ್ಮೀ ದೇವಿ ಜಾತ್ರೆ ನಡೆಯುವುದಿಲ್ಲ, ಬದಲಿಗೆ ಐದು ವರ್ಷಕ್ಕೊಮ್ಮೆ ಬರುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ 10 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ಸಂಭ್ರಮ ಕಳೆಗಟ್ಟಿದೆ. ಸರ್ವಧರ್ಮೀಯರು ಶ್ರದ್ಧಾಭಕ್ತಿಯಿಂದ ಪೂಜಿಸುವ ಲಕ್ಷ್ಮೀ ದೇವಿ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ. ಸ್ಥಳೀಯರು ತಮ್ಮ ಮನೆಗಳನ್ನು ಸಿಂಗರಿಸಿ ಸಂಬಂಧಿಗಳನ್ನು ಆಹ್ವಾನಿಸುತ್ತಿದ್ದು, ವಿವಿಧ ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಿದ್ದಾರೆ. ಜಾತ್ರೆಗೆ ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ತೀರಿಸಿ, ಭಕ್ತಿ ಸಮರ್ಪಿಸುತ್ತಾರೆ.
ಕಣ್ಮನ ಸೆಳೆದ ಜೋಡು ರಥ: ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಇಲ್ಲಿನ ಲಕ್ಷ್ಮೀ ದೇವಿ ಮಂದಿರ ಝಗಮಗಿಸುತ್ತಿದೆ. ತರಹೇವಾರಿ ಹೂಗಳಿಂದ ಹಾಗೂ ವಿದ್ಯುತ್ ದೀಪದಿಂದ ಸಿಂಗಾರಗೊಂಡಿರುವ ದೇವಿಯನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ. ಒಂಬತ್ತು ದಿನಗಳ ಕಾಲ ಗ್ರಾಮದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಮುಖ್ಯವಾಗಿ ದೇವಿಯನ್ನು ತೇರಿನಲ್ಲಿ ಕೂರಿಸಿ ಮುಖ್ಯ ಓಣಿಗಳಲ್ಲಿ ಒಟ್ಟಾಗಿ ಸಾಗಿದ್ದು ವಿಶೇಷವಾಗಿತ್ತು.
46 ಶಿಲ್ಪಿಗಳಿಂದ ಜೋಡು ರಥ ಕೆತ್ತನೆ: ವಿಶ್ವಕರ್ಮ ಶಿಲ್ಪಿಗಳಿಂದ 9 ತಿಂಗಳ ಕಾಲ ಈ ಎರಡು ರಥಗಳನ್ನು ಕೆತ್ತಲಾಗಿದೆ. ರಥ ತಲಾ 15 ಟನ್ ತೂಕವಿದ್ದು, ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಈ ರಥಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೇಶ್ವದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಬಾಶಿಯ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಪುತ್ರ ಲಕ್ಷ್ಮೀ ನಾರಾಯಾಣ ಆಚಾರ್ಯ ಅವರು ಈ ರಥಗಳನ್ನು ನಿರ್ಮಿಸಿದ್ದಾರೆ. ರಥ ನಿರ್ಮಾಣದಲ್ಲಿ ಒಟ್ಟು 46 ಜನ ಶಿಲ್ಪಿಗಳ ಕೆಲಸ ಮಾಡಿದ್ದು, ಈ ಜೋಡು ರಥೋತ್ಸವ ಅದ್ಧೂರಿಯಾಗಿ ಜರುಗಿತು. ರಥಗಳನ್ನು ಸಂಪೂರ್ಣ ಅಲಂಕರಿಸಲಾಗಿತ್ತು. ಬಂಗಾರ ಲೇಪಿನ ನೋಡುಗರನ್ನು ಆಕರ್ಷಿಸಿತು.
ಭಂಡಾರದಲ್ಲಿ ಮಿಂದೆದ್ದ ಭಕ್ತರು: ಗೋಕಾಕ್ ಜಾತ್ರೆ ಭಂಡಾರದ ಜಾತ್ರೆ ಅಂತಾನೆ ಪ್ರಖ್ಯಾತಿ ಪಡೆದಿದೆ. ಭಂಡಾರದಲ್ಲಿ ಲಕ್ಷಾಂತರ ಭಕ್ತರು ಮಿಂದೆದ್ದರು. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು, ಯುವಕ-ಯುವತಿಯರು ಪರಸ್ಪರ ಭಂಡಾರ ಹಚ್ಚಿ ಸಂಭ್ರಮಿಸಿದರು. ಇಡೀ ಗೋಕಾಕ್ ನಗರ ಹಳದಿಮಯ ಆಗಿತ್ತು.

10 ಲಕ್ಷಕ್ಕೂ ಅಧಿಕ ಭಕ್ತರು ಸಾಕ್ಷಿ
ಜಾತ್ರೆ ನಡೆದು ಬಂದ ದಾರಿ: ಕಳೆದ ಜೂನ್ 30ರಂದು ದೇವಿಯನ್ನು ಜಿನಗಾರ ಮನೆಯಿಂದ ತಂದು ಅಂಬಿಗೇರ ಓಣಿಯಲ್ಲಿ ಕೂಡಿಸಲಾಗಿತ್ತು. ಅಲ್ಲದೇ, ಜು.2ರಂದು ಮಹಾಲಕ್ಷ್ಮೀದೇವಿಯರಿಗೆ ಅಭಿಷೇಕ ಮತ್ತು ಪೂಜಾ ಕಾರ್ಯ ಜರುಗಿದವು. ಮಧ್ಯಾಹ್ನ ಪುರ ಜನರಿಂದ ನೈವೇದ್ಯ ಕಾರ್ಯಕ್ರಮ ರಾತ್ರಿ ನಡೆದ ದೇವಿಯರ ಹೊನ್ನಾಟ ಕಣ್ಮನ ಸೆಳೆಯಿತು. ಅಂದೇ ದ್ಯಾಮವ್ವಾದೇವಿಯನ್ನು ರಥದಲ್ಲಿ ಕೂರಿಸುವ ಕಾರ್ಯಕ್ರಮ ನಡೆಯಿತು.
ಎರಡು ರಥಗಳು ಸೋಮವಾರ ಪೇಠದಿಂದ ದ್ಯಾಮವ್ವದೇವಿಯ ಗುಡಿಯವರೆಗೆ ತಲುಪಿತು. ಜು. 3ರಂದು ಮಧ್ಯಾಹ್ನ ಜರುಗಿದ ರಥೋತ್ಸವ ಸಂಭ್ರಮ ಮುಗಿಲು ಮುಟ್ಟಿತ್ತು. 2 ರಥಗಳು ಶ್ರೀ ದ್ಯಾಮವ್ವಾದೇವಿಯ ಗುಡಿಯಿಂದ ಚೌಧರಿ ಕೂಟದವರೆಗೆ ಬರುವುದು ವಾಡಿಕೆ. 4ರಂದು ಮಧ್ಯಾಹ್ನ ರಥೋತ್ಸವ ನಡೆಯಿತು. ಒಂದು ರಥವು ಶ್ರೀ ಚೌಧರಿ ಕೂಟದಿಂದ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಹೋದರೆ, ಮತ್ತೊಂದು ರಥ ಚೌಧರಿ ಕೂಟದಿಂದ ಕೆಳಗಿನಪೇಟ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಸಾಗಿತು.
https://www.facebook.com/share/r/19kqNefTWq/
ಜು. 5ರಂದು ಪುರಜನರಿಂದ ನೈವೇದ್ಯ ಕೊಡುವ ಕಾರ್ಯಕ್ರಮ ಜರುಗಿತು. ಎತ್ತಿನ ಶರತ್ತುಗಳು ಮೈನವೀರೇಳಿಸಿದರೆ, 2 ಕೋಣಗಳನ್ನು ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಮಸ್ಕಾರ ಮಾಡಿಸುವುದು ಹಾಗೂ ಮದ್ದು ಹಾರಿಸುವ ಕಾರ್ಯಕ್ರಮವು ಗಮನ ಸೆಳೆಯಿತು. ಜು. 6ರಿಂದ 8ರ ವರೆಗೆ ವಿವಿಧ ಸ್ಪರ್ಧೆಗಳು ಸೇರಿದಂತೆ ಕುಸ್ತಿ ಪಂದ್ಯಾವಳಿಗಳು ಹಾಗೂ ಗ್ರಾಮದ ಎಲ್ಲ ದೇವರುಗಳಿಗೆ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. 8ರಂದು ಜಾತ್ರೆಗೆ ವಿದ್ಯುಕ್ತವಾಗಿ ತೆರೆಬೀಳಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಅಶೋಕ್ ಪೂಜಾರಿ, ಮಹಾಂತೇಶ ಕಡಾಡಿ, ಜಾತ್ರಾ ಕಮೀಟಿಯವರು ಸೇರಿದಂತೆ ಮತ್ತಿತರರು ಜಾತ್ರೆಯ ಯಶಸ್ಸಿಗೆ ಶ್ರಮಿಸಿದ್ದು, ವಿವಿಧ ರಾಜಕೀಯ ಮುಖಂಡರು, ಗಣ್ಯರು ಕೂಡ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.
‘ನೆಕ್ಸ್ಟ್ ಸಿಎಂ ಸತೀಶ ಜಾರಕಿಹೊಳಿ’ ಬ್ಯಾನರ್: ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳು ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಬ್ಯಾನರ್ ಪ್ರದರ್ಶಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಬ್ಯಾನರ್ ಹಿಡಿದು ಜೈಕಾರ ಕೂಗಿದರು.
ಗಾಳಿಯಲ್ಲಿ ಗುಂಡು: ರಮೇಶ್ ಜಾರಕಿಹೊಳಿ ಪುತ್ರ ಸಂತೋಷ ಜಾರಕಿಹೊಳಿ ದೇವಸ್ಥಾನ ಸಮೀಪದಲ್ಲೇ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಸಂಬಂಧ ಗೋಕಾಕ್ ಶಹರ್ ಪೊಲೀಸ್ ಠಾಣೆಯಲ್ಲಿ ಸಂತೋಷ ಜಾರಕಿಹೊಳಿ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರ್ಚಕರು ಹೇಳಿದ್ದೇನು..? ದೇವಸ್ಥಾನದ ಅರ್ಚಕ ಮಾಲದಿನ್ನಿ ಅವರನ್ನು “ಕೊರೊನಾ ಹಿನ್ನೆಲೆ 10 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ದೇವಿಯ ಮೂರ್ತಿ ನಾವೇ ಪ್ರತಿಷ್ಠಾಪನೆ ಮಾಡಿದ್ದೇವೆ. ಮೂಲತಃ ನಮ್ಮದು ಬಡಿಗೇರ ಮನೆತನ. ಮಾಲದಿನ್ನಿ ಊರಿನಿಂದ ಬಂದಿದ್ದರಿಂದ ಮಾಲದಿನ್ನಿ ಅಂತಾ ನಮ್ಮನ್ನು ಕರೆಯುತ್ತಾರೆ. ನಮ್ಮ ಅಜ್ಜ ಭೀಮಪ್ಪ ರೇವಪ್ಪ ಮಾಲದಿನ್ನಿ ಅವರು ಮೂರ್ತಿ ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದ ಇವತ್ತಿನವರೆಗೂ ಜಾತ್ರೆ ನಡೆಯುತ್ತಿದೆ. ಮೊದಲೆಲ್ಲಾ ಕಾಲರಾ, ಪ್ಲೇಗ್ ಅಂತಾ ರೋಗಗಳು ಬರುತ್ತಿದ್ದವು. ಹಾಗಾಗಿ, ಔಷಧಿ ಗುಣ ಹೊಂದಿರುವ ಅರಿಶಿಣ ಭಂಡಾರವನ್ನು ಆಡುವುದರಿಂದ ರೋಗಗಳು ಗುಣಮುಖ ಆಗುತ್ತಿದ್ದವು. ಗೋಕಾಕ್ ಜಾತ್ರೆ ಎಂದರೆ ಭಂಡಾರದ ಜಾತ್ರೆ ಅಂತಾನೇ ಪ್ರಸಿದ್ಧಿ ಪಡೆದಿದೆ. 9 ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರು ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ” ಎಂದು ವಿವರಿಸಿದರು.
ಭಕ್ತರು ಹೇಳಿದ್ದಿಷ್ಟು: “ಗೋಕಾಕ್ ಜಾತ್ರೆ ಉತ್ತರಕರ್ನಾಟಕದಲ್ಲೆ ಅತೀ ದೊಡ್ಡ ಭಂಡಾರದ ಜಾತ್ರೆ ಆಗಿದೆ. ಹತ್ತು ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವ ಹಿನ್ನೆಲೆ ದೇವಸ್ಥಾನವನ್ನು ಸುಂದರವಾಗಿ ನವೀಕರಿಸಲಾಗಿದೆ. ಅಲ್ಲದೇ ಹೊಸದಾಗಿ ಜೋಡು ರಥಗಳನ್ನು ಮಾಡಿಸಲಾಗಿತ್ತು. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ಜರುಗಿತು. ರಾಜಬೀದಿಯಲ್ಲಿ ರಥ ಹೋಗುತ್ತಿದ್ದ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಶರತ್ತುಗಳನ್ನು ಆಯೋಜಿಸಲಾಗಿತ್ತು. ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು” ಎಂದು ಭಕ್ತ ನಾಗರಾಜ ದುಂಡಪ್ಪ ಚೌಕಾಶಿ ತಿಳಿಸಿದರು