ಮೈಸೂರು, ಸೆಪ್ಟೆಂಬರ್ 24: ದೇಶ ವಿದೇಶಗಳ ಗಮನಸೆಳೆದಿರುವ ಐತಿಹಾಸಿಕ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ ಎಂಬುದನ್ನು ಹೇಳುವುದೇ ಕಷ್ಟವಾಗುತ್ತದೆ. ಏಕೆಂದರೆ ಈ ಮಹೋತ್ಸವಕ್ಕೆ ನಾಲ್ಕು ಶತಮಾನಗಳ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ. ಬೆಡಗು ಭಿನ್ನಾಣವಿದೆ.
ಇದು ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿಯೊಂದಿಗೆ ಹಳ್ಳಿಗಳಿಂದ ಆರಂಭವಾಗಿ ಜಾಗತಿಕ ಜಗುಲಿಯ ಎತ್ತರಕ್ಕೆ ದಸರಾ ಬೆಳೆದು ನಿಂತಿರುವ ಜನಮನದ ಜನತಾ ದಸರಾ ಎಂದರೆ ತಪ್ಪಾಗಲಾರದು.
ಸಾಮಾನ್ಯವಾಗಿ ದಸರಾ ಎಲ್ಲೆಡೆ ನಡೆದರೂ ಮೈಸೂರು ದಸರಾಕ್ಕೊಂದು ಐತಿಹಾಸಿಕ ಮೆರುಗಿದೆ ಹೀಗಾಗಿಯೇ ಅದು ವಿಶ್ವವಿಖ್ಯಾತಿಯಾಗಿದೆ. ದಸರಾ ಅಂದರೆ ನಮ್ಮ ಕಣ್ಣಿಗೆ ಕಾಣಿಸುವ ಜಗಮಗಿಸುವ ವಿದ್ಯುದ್ದೀಪದ ಅಲಂಕಾರ, ಜಂಬೂಸವಾರಿ ಮಾತ್ರವಲ್ಲದೆ ಅದರಾಚೆಗೆ ಕರ್ನಾಟಕದ ಸಂಸ್ಕೃತಿಯೇ ತೆರೆದುಕೊಳ್ಳುತ್ತಾ ಮನೋರಂಜನೆಯ ಸವಿ, ಕಲೆ, ಕ್ರೀಡೆಯ ಪ್ರೋತ್ಸಾಹ, ಸಡಗರ ಸಂಭ್ರಮ ಹೀಗೆ ಒಂದೇ ಎರಡೇ ನೂರಾರು ವಿಶೇಷತೆಗಳು ಇಲ್ಲಿ ಕಾಣಿಸುತ್ತವೆ. ಅಷ್ಟೇ ಅಲ್ಲದೆ ಲಕ್ಷಾಂತರ ಜನರ ಹೊಟ್ಟೆಪಾಡು ಕೂಡ ಹೌದು.
ನಮಗೆ ನಿಮಗೆ ಎಲ್ಲರಿಗೂ ಮೈಸೂರು ದಸರಾವನ್ನು ಹೊಗಳಲು ಪದಗಳಿಲ್ಲ. ಆದರೂ ದಸರಾ ಬಗ್ಗೆ ಹೇಳುವುದಾದರೆ ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜೆಯ ನಂತರ ಹತ್ತನೇ ದಿನದ ವಿಜಯದಶಮಿ ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತದೆ. ವಿಶ್ವದ ಎಲ್ಲೆಡೆಯಿಂದ ಜನ ಬರುತ್ತಾರೆ. ಹಳ್ಳಿಹಳ್ಳಿಗಳಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟುತ್ತದೆ. ನಾಡಹಬ್ಬಕ್ಕಾಗಿ ಅರಮನೆ, ಚಿನ್ನದ ಸಿಂಹಾಸನ, ಚಿನ್ನಬೆಳ್ಳಿಯ ಅಂಬಾರಿಗಳು, ದೇವರುಗಳು ಸಿದ್ಧಗೊಂಡರೆ, ಮೈಸೂರಿನ ಗಲ್ಲಿಗಲ್ಲಿಗಳಲ್ಲೂ ಜನ ಹಿತ್ತಾಳೆ, ಕಂಚಿನ ದೇವರುಗಳ ವಿಗ್ರಹ ತೊಳೆದು ಆಯುಧ ಪೂಜೆಗೆ ಸಜ್ಜಾಗುತ್ತಾರೆ.