ಬೆಂಗಳೂರು, ಸೆಪ್ಟೆಂಬರ್ 19: 2023ರ ವಿಧಾನಸಭಾ ಚುಣಾವಣೆಯಲ್ಲಿ ರಾಜರಾಜೇಶ್ವರಿ ನಗರದ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿತ್ತು. ರಾಜರಾಜೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಬಿಜೆಪಿ ಪಕ್ಷದಿಂದ ಮುನಿರತ್ನ ಸ್ಪರ್ಧೆ ನಡೆಸಿದ್ದು, ಕಡಿಮೆ ಅಂತರದಲ್ಲಿ ಮುನಿರತ್ನ ಗೆಲುವು ಸಾಧಿಸಿದ್ದರು.
ಕಳೆದ ವಿಧಾನಸಭಾ ಚುಣಾವಣೆಯ ಸಂದರ್ಭದಲ್ಲಿ ರಾಜಕೀಯ ಎದುರಾಳಿಯಾಗಿದ್ದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಹೊಸ ಷಡ್ಯಂತ್ರವನ್ನ ರೂಪಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮುನಿರತ್ನರಿಂದ HIV ಹನಿಟ್ರ್ಯಾಪ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜಕೀಯ ಎದುರಾಳಿಯಾಗಿದ್ದ ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಅವರಿಂದ ತಂತ್ರಗಾರಿಕೆ ನಡೆದಿತ್ತು ಎನ್ನುವ ಕುರಿತು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ. ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮೂವರ ತಂಡವನ್ನ ಮುನಿರತ್ನ ನಿಯೋಜಿಸಿದ್ದರು ಎಂದು ಹೇಳಲಾಗಿದೆ. ಈ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡುವ ದಿನವೇ ಕಾಂಗ್ರೆಸ್ ಕಾರ್ಯಕರ್ತರ ತಂಡವನ್ನ ನೋಡಿ ಭಯದಿಂದ ನಿಯೋಜಿಸಿದ್ದ ಮೂವರು ಹಿಂಜರಿದಿದ್ದಾರೆ ಎನ್ನಲಾಗಿದೆ.
ಏಡ್ಸ್ ರೋಗಿಯ ರಕ್ತ ನಿಮಗೆ ಇಂಜೆಕ್ಟ್ ಮಾಡುವ ಕುರಿತು ಮುನಿರತ್ನ ತಂತ್ರಗಾರಿಕೆ ನಡೆಸಿದ್ದರು ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಂಸದ ಡಿ ಕೆ ಸುರೇಶ್ ಮಾತನಾಡಿ, ಇದೊಂದು ಅಸಹ್ಯಕರ, ಯಾವ ರೀತಿ ಪದ ಬಳಕೆ ಮಾಡಬೇಕೆಂತಲೂ ಗೊತ್ತಿಲ್ಲ. ನಾನು ಯಾವತ್ತಿಗೂ ಒಳ್ಳೆಯದನ್ನು ಬಯಸೋದು ಕೆಟ್ಟದ್ದನ್ನು ಅಂತೂ ಬಯಸೋದಿಲ್ಲ. ಆದರೆ ನಾವಂತೂ ಯಾರಿಗೂ ಹೆದರುವುದಿಲ್ಲ. ಇದರ ಒಳ ಮರ್ಮಗಳ ಬಗ್ಗೆ ಆಳವಾಗಿ ಅರ್ಥ ಮಾಡಬೇಕಿದೆ. ನಾನು ಏನಾದರೂ ಆ ವ್ಯಕ್ತಿ ಬಗ್ಗೆ ಕೆಟ್ಟದ್ದ ಬಯಸಿಲ್ಲ. ಒಳ್ಳೆಯದನ್ನು ಬಯಸಿದ್ದೇನೆ, ಕೆಲಸಕ್ಕೆ ಪ್ರೋತ್ಸಾಹಿಸಿದ್ದೇನೆ ಎಂದು ಹೇಳಿದರು.