ಖಾನಾಪುರ: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದಡಿ ತಾಲ್ಲೂಕಿನ ಲಿಂಗನಮಠ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮುಖ್ಯಶಿಕ್ಷಕ ಎಂ.ಎಂ ಕೋಟೂರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಿಇಒ ರಾಜೇಶ್ವರಿ ಕುಡಚಿ ಶನಿವಾರ ಆದೇಶಿಸಿದ್ದಾರೆ.
ಜೂನ್ 19ರಂದು ಲಿಂಗನಮಠ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಸೀಂ ಹಟ್ಟಿಹೊಳಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಆನಂದ ಮಾಟೊಳ್ಳಿ ಅವರ ಉಪಸ್ಥಿತಿಯಲ್ಲಿ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಶಾಸಕ ವಿಠ್ಠಲ ಹಲಗೇಕರ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಶಾಲೆಗೆ ಭೇಟಿ ನೀಡಿ ತನಿಖೆ ಕೈಗೊಂಡ ಬಿಇಒ, ಮುಂದಿನ ಆದೇಶದವರೆಗೆ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ. ಹೊಸ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಅಮಾನ್ಯವಾಗಿದೆ ಎಂದೂ ತಿಳಿಸಿದ್ದಾರೆ.