ಬೆಳಗಾವಿ: ಮುಂಗಾರು ಚುರುಕುಗೊಂಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಜನರು ತುಸು ನಿರಾಳವಾಗಿದ್ದಾರೆ. ಆದರೆ, ಮಳೆ ಸೃಷ್ಟಿಸಿದ ಅವಾಂತರಗಳು ನಗರದಲ್ಲಿ ಜನರನ್ನು ಮತ್ತೆ ಸಂಕಷ್ಟಕ್ಕೆ ತಳ್ಳುತ್ತಿವೆ. ಒಂದು ಸಮಸ್ಯೆ ನೀಗಿತು ಎನ್ನುಷ್ಟರಲ್ಲಿ ಮತ್ತೊಂದು ಧುತ್ತೆಂದು ಎದುರಾಗಿದೆ.
ಒಂದು ತಾಸು ಧಾರಾಕಾರ ಮಳೆಯಾದರೆ ಸಾಕು; ವಿವಿಧ ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಮರಗಳು ನೆಲಕ್ಕುರುಳುವುದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗುವುದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ.
ಇಲ್ಲಿನ ಹಳೆಯ ಪಿ.ಬಿ.ರಸ್ತೆ ಬಳಿ ಚರಂಡಿಗಳಲ್ಲಿನ ಹೂಳೆಲ್ಲ ರಸ್ತೆ ಮೇಲೆ ಬಂದು ನಿಲ್ಲುತ್ತಿದೆ. ಶನಿವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ಹಳೆಯ ಪಿ.ಬಿ. ರಸ್ತೆಯ ಮೇಲ್ಸೇತುವೆಯಿಂದ ಕರ್ನಾಟಕ ಚೌಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆರೆ ಸ್ವರೂಪ ಪಡೆದುಕೊಂಡಿತ್ತು.