ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಅವರ ನಾಯಕರು ಸೋಲಿನ ಭಯದಿಂದ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಸಂಸದೆ ಮಂಗಲಾ ಸುರೇಶ ಅಂಗಡಿ ವಾಗ್ದಾಳಿ ನಡೆಸಿದರು.
ನಿನ್ನ ಮಾತಿನ ಮೇಲೆ ಹಿಡಿತ ಇರಲಿ.
ಕಳೆದ 20 ವರ್ಷದಿಂದ ಬೆಳಗಾವಿ ಅಭಿವೃದ್ಧಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಸರಿಯಲ್ಲ ಎಂದು ಮೃಣಾಲ್ ಗೆ ಏಕವಚನದಲ್ಲಿ ಎಚ್ಚರಿಕೆ ನೀಡಿದರು.
ನಿಮ್ಮ ತಾಯಿ ರಾಜಕೀಯದಲ್ಲಿದ್ದಾರೆ. ರಾಜಕಾರಣ ಮಾಡುತ್ತಿದ್ದಾರೆ. ಅವರು ಮಾತನಾಡಲಿ. ಆದರೆ ಮೃಣಾಲ್ ನೀನು ಬಹಳ ಚಿಕ್ಕವನು. ರಾಜಕಾರಣ ಮಾಡುವುದಕ್ಕೆ ಸಾಕಷ್ಟು ಸಮಯವಿದೆ. ಹಿರಿಯ ರಾಜಕಾರಣಿಗಳ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇರಲಿ ಎಂದು ಹೇಳಿದರು.
ಕಳೆದ 20 ವರ್ಷದಿಂದ ಬಿಜೆಪಿ ಸಂಸದರು ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ 20 ವರ್ಷದಲ್ಲಿ ನಾವು 16 ಸಾವಿರ ಕೋಟಿ ರೂ.ಗಳ ಅನುದಾನ ತಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಮೃಣಾಲ್ ಸೋಲಿನ ಹತಾಶೆಯಲ್ಲಿ ಬೇಕಾದ ಹಾಗೆ ಮಾತನಾಡುವದು ಸರಿಯಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ಕುಟುಂವದವರ ವಿರುದ್ಧ ಸುಳ್ಳು ಆರೋಪ ಮಾಡಿರುವ ಮೃಣಾಲ್ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಮಂಗಲಾ ಅಂಗಡಿ ಹೇಳಿದರು.
Laxmi News 24×7