ಕಲಬುರಗಿ: ತೃತೀಯ ಲಿಂಗಿಯೊಬ್ಬರು ಎಂಎ ಪದವಿ ಪರೀಕ್ಷೆ ಬರೆಯುವ ಮೂಲಕ ತಮ್ಮ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಹೌದು ಸುಪ್ರೀಂ ಕೋರ್ಟ್ ತೃತೀಯ ಲಿಂಗಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ಬಳಿಕ ದೇಶದಲ್ಲಿ ಮಂಗಳಮುಖಿ ಮಹಿಳೆಯರ ಶಿಕ್ಷಣದಲ್ಲಿ ಧನಾತ್ಮಕ ಅಭಿವೃದ್ಧಿಯಾಗಿದೆ.
ತನ್ನ ಪರೀಕ್ಷೆಯಲ್ಲಿ ನಿರತರಾಗಿರುವ ದಿವ್ಯಾಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ತೃತೀಯ ಲಿಂಗಿ ದಿವ್ಯಾ ಅವರು ಎಂಎ ರಾಜ್ಯಶಾಸ್ತ್ರದ ಅಂತಿಮ ಪರೀಕ್ಷೆ ಬರೆದು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಸೋಮವಾರ ನಡೆದ ಪರೀಕ್ಷೆಯಲ್ಲಿ ಉಳಿದ ಪರಿಕ್ಷಾರ್ಥಿಗಳ ಜೊತೆ ಕುಳಿತು ಪರೀಕ್ಷೆ ಬರೆದಿದ್ದಾರೆ.
ಮೂಲತಃ ಚಿಂಚೋಳಿ ತಾಲೂಕಿನ ಧುತ್ತರಗಾ ಗ್ರಾಮದ ಲಿಂಗಾಯತ ಸಮುದಾಯದ ರಾಜಶೇಖರ್ ಕಾಲೇಜು ವಿದ್ಯಾರ್ಥಿಯಾಗಿದ್ದ ಸಮಯದಲ್ಲೇ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಿಂದಾಗಿ ಮಹಿಳೆಯಾಗಿ ಬದಲಾಗಿದ್ದಾರೆ. ಕಾಲೇಜಿನ ದಾಖಲೆಗಳಲ್ಲಿ ರಾಜಶೇಖರ್ ಎಂದು ಹೆಸರಿದೆ. ಹೀಗಾಗಿ ಕಾಲೇಜಿನಲ್ಲಿ ರಾಜಶೇಖರ್ ಎಂದೇ ದಿವ್ಯಾ ಅವರನ್ನು ಗುರುತಿಸುತ್ತಾರೆ.
ತನ್ನ ಪರೀಕ್ಷೆಯಲ್ಲಿ ನಿರತರಾಗಿರುವ ದಿವ್ಯಾಎಂ.ಎ ಮೊದಲ ವರ್ಷ ಪ್ಯಾಂಟು ಶರ್ಟು ಹಾಕಿಕೊಂಡು ಕಾಲೇಜಿಗೆ ಹಾಜರಾಗುತ್ತಿದ್ದ ರಾಜಶೇಖರ್, ಎಂ.ಎ ಎರಡನೇ ವರ್ಷಕ್ಕೆ ದಿವ್ಯಾ ಎಂಬ ಸುಂದರ ಹುಡುಗಿಯಾಗಿ ಬಂದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ಬಗ್ಗೆ ದಿವ್ಯಾ ಅವರನ್ನು ಮಾತನಾಡಿಸಿದಾಗ, ನಮ್ಮ ಮನೆಯಲ್ಲಿ ನಾನು ಹೆಣ್ಣಾಗಿ ಬದಲಾಗುವುದನ್ನು ತುಂಬಾನೇ ವಿರೋಧಿಸಿದ್ದರು. ಹಾಗಾಗಿ ನಾನು ನನ್ನಂತೆಯೇ ಇರುವ ಸಮುದಾಯದ ಜತೆ ಸೇರಿಕೊಂಡೆ. ನಮ್ಮ ಸಮುದಾಯದಲ್ಲಿದ್ದು, ಓದಿ ಮುಂದೆ ಬರಬೇಕು. ನನಗೆ ಎಂ.ಎ ಮುಗಿಸಿ ಪಿಹೆಚ್ಡಿ ಮಾಡಬೇಕು ಎಂಬ ಕನಸಿದೆ ಎನ್ನುತ್ತಾರೆ ದಿವ್ಯಾ. ಸದ್ಯ ಕಲಬುರಗಿಯ ದುಬೈ ಕಾಲೋನಿಯ ತಮ್ಮ ಗುರುವಿನ ಮನೆಯಲ್ಲಿದ್ದು, ಕಾಲೇಜಿಗೆ ಬರುತ್ತಿದ್ದರು. ಪರೀಕ್ಷೆ ಮುಗಿದ ನಂತರ ಮಂಬೈಗೆ ತೆರಳುವ ಉದ್ದೇಶ ಹೊಂದಿದ್ದಾರೆ.
ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಶಾಂತಪ್ಪ ಸೂರನ್ ಅವರು, ಇಂತಹ ಬದಲಾವಣೆಗೆ ನಮ್ಮ ಕಾಲೇಜು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರ ಈ ಬಗ್ಗೆ ಮಾತನಾಡಿದ್ದು, ”ಇತರ ಲಿಂಗಾಂತರಿ ಸಮುದಾಯಕ್ಕೆ ದಿವ್ಯಾ ಮಾದರಿಯಾಗಿದ್ದಾರೆ. ಅಂಬೇಡ್ಕರ್ ಅವರ ಹೆಸರಿನ ಈ ಕಾಲೇಜಿನಲ್ಲಿ ಈ ಬದಲಾವಣೆ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ”