ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದಡಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ತೂಗುದೀಪ ಸೇರಿದಂತೆ ನಾಲ್ವರ ಮನೆಗಳ ಮೇಲೆ ಶೋಧ ವಾರೆಂಟ್ ಪಡೆದು ಪರಿಶೀಲನೆ ನಡೆಸಿದರು. ನಟರಾದ ಜಗ್ಗೇಶ್, ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ನಿವಾಸಗಳಲ್ಲಿ ಇಲಾಖೆಯ ನಾಲ್ಕು ತಂಡಗಳು ಪ್ರತ್ಯೇಕವಾಗಿ ತೆರಳಿದ್ದು, ನೊಟೀಸ್ ನೀಡಿ, ಮನೆಯ ಇಂಚಿಂಚೂ ಶೋಧಿಸಿವೆ.
ಆರ್.ಆರ್.ನಗರದಲ್ಲಿರುವ ದರ್ಶನ್ ಮನೆಗೆ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದ ತಂಡ ತೆರಳಿ ಪರಿಶೀಲಿಸಿತು. ಈ ವೇಳೆ ದರ್ಶನ್ ಇರಲಿಲ್ಲ. ಅದೇ ರೀತಿ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ರಾಕ್‌ಲೈನ್ ವೆಂಕಟೇಶ್, ಜೆ.ಪಿ.ನಗರದಲ್ಲಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ. ಪರಿಶೀಲನೆ ಕಾರ್ಯ ಮುಂದುವರೆಸುತ್ತಿರುವ ಅಧಿಕಾರಿಗಳು ಹುಲಿಯ ಉಗುರಿನ ಪೆಂಡೆಂಟ್ ಸಿಕ್ಕರೆ ಕಾನೂನಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನೊಟೀಸ್ ವಿವರ: ಸಾಮಾಜಿಕ ಜಾಲತಾಣ ಹಾಗೂ ನಿರ್ದಿಷ್ಟವಾಗಿ ಕೆಲವು ಸಂಘ ಸಂಸ್ಥೆಗಳು ಹುಲಿಯ ಉಗುರಿನ ಪೆಂಡೆಂಟ್ ಧರಿಸಿರುವ ತಮ್ಮ ಛಾಯಾಚಿತ್ರಗಳೊಂದಿಗೆ ತಮ್ಮ ವಿರುದ್ಧ ದೂರು ದಾಖಲಿಸಿವೆ. ವನ್ಯಜೀವಿಗಳ ಅಂಗಾಂಗಗಳನ್ನು ಹೊಂದುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9, 39,40,42,44, 48ಎ, 49ಎ, 49ಬಿ, 51,52 ಹಾಗೂ 58 ರ ಪ್ರಕಾರ ಅಪರಾಧ. ಈ ನೊಟೀಸ್ ತಲುಪಿದ ತಕ್ಷಣ ತಮ್ಮ ಸ್ವಾಧೀನದಲ್ಲಿರುವ ವನ್ಯಜೀವಿ ಅಂಗ ಎಂದು ಹೇಳಲಾದ ವಸ್ತುವನ್ನು ತಪಾಸಣೆಗೆ ಒಳಪಡಿಸಲು ಈ ಮೂಲಕ ತಮಗೆ ತಿಳಿಸಲಾಗಿದೆ. ತಪ್ಪಿದಲ್ಲಿ, ನಿಮ್ಮ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಕ್‌ಲೈನ್ ವೆಂಕಟೇಶ್ ಅವರಿಗೆ ನೀಡಿದ ನೊಟೀಸ್‌ನಲ್ಲಿ ತಿಳಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೇಳುವುದೇನು?: ಅಳಿವಂಚಿನಲ್ಲಿರುವ ಕಾಡು ಪ್ರಾಣಿ ಬೇಟೆಯಾಡುವುದು, ಸೆರೆಹಿಡಿಯುವುದು, ಮಾರಾಟ ಮಾಡುವುದು, ಪ್ರಾಣಿಗಳನ್ನು ಕೊಂದು ಅದರ ಉಗುರು, ದಂತ, ಕೊಂಬು ಸೇರಿದಂತೆ ಇನ್ನಿತರ ಪಳೆಯುಳಿಕೆಗಳನ್ನು ಇರಿಸಿಕೊಳ್ಳುವುದು ಕಾನೂನುಬಾಹಿರ. ಕಾನೂನು ಉಲ್ಲಂಘಿಸಿರುವುದು ಸಾಬೀತಾದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಉನ್ನತ ಮಟ್ಟದ ಸಮಿತಿ: ಹುಲಿ ಉಗುರು, ಹುಲಿ ಹಲ್ಲು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನ ಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಎಪಿಸಿಸಿಎಫ್ (ವನ್ಯಜೀವಿ) ಇವರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ನಿರ್ದೇಶಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ (ದೂರು) ಪ್ರಕರಣಗಳು, ಕಾನೂನಿನಡಿಯಲ್ಲಿ ಕೈಗೊಂಡಿರುವ ಕ್ರಮ ಹಾಗೂ ಹಾಲಿ ದಾಖಲಾಗಿರುವ ಮತ್ತು ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಿದ್ದಾರೆ.