Breaking News

ಹಾವೇರಿಯಲ್ಲಿದೆ ಸುಸಜ್ಜಿತ ಅತ್ಯಾಧುನಿಕ ಗ್ರಂಥಾಲಯ:

Spread the love

ಹಾವೇರಿ: ಮೊಬೈಲ್​ ಹಾವಳಿಗೆ ಮರೆಮಾಚುತ್ತಿರುವ ಹವ್ಯಾಸಗಳಲ್ಲಿ ಓದುವ ಹವ್ಯಾಸ ಸಹ ಒಂದು.

ಈ ಹಿಂದೆ ಪ್ರತಿ ಗ್ರಾಮಕ್ಕೆ ಒಂದು ಗ್ರಂಥಾಲಯಗಳಿದ್ದವು. ಗ್ರಾಮದ ಜನರು ದಿನಪತ್ರಿಕೆ ವಾರಪತ್ರಿಕೆ ಮಾಸಿಕ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆ ಓದಲು ಗ್ರಂಥಾಲಯಕ್ಕೆ ಬರುತ್ತಿದ್ದರು. ಅದರ ಜೊತೆಗೆ ಕನ್ನಡ ನುಡಿಯ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು.

ಕವನಸಂಕಲನ, ಕಾದಂಬರಿ, ಕಾವ್ಯ ಪ್ರಭಂದಗಳು ಕಾದಂಬರಿಗಳು ಕಥಾಸಂಕಲನ ಸೇರಿದಂತೆ ವಿವಿಧ ಪ್ರಕಾರದ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಅಷ್ಟೇ ಯಾಕೆ ಕನ್ನಡದ ಆದಿಕವಿಗಳಿಂದ ಹಿಡಿದು ಇತ್ತಿಚೀನ ಲೇಖಕರ ಗ್ರಂಥಗಳು ಸಹ ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಜನ ಇವುಗಳನ್ನು ಓದಲು ಗ್ರಂಥಾಲಯದ ಮೆಂಬರಶಿಪ್ ಪಡೆದು ಪುಸ್ತಕ ಎರವಲು ಪಡೆದು ಮನೆಗೆ ತಂದು ಓದುವ ಹವ್ಯಾಸ ಇಟ್ಟುಕೊಂಡಿದ್ದರು.

10 ಲಕ್ಷ ರೂಪಾಯಿ ವೆಚ್ಚದ ಗ್ರಂಥಾಲಯ: ಆದರೆ, ಈಗ ಪುಸ್ತಕಗಳಿಗೆ ಗ್ರಂಥಾಲಯವನ್ನು ಅವಲಂಬಿಸುವ ಕಾಲ ಬದಲಾಗಿದೆ. ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲೇ ಎಲ್ಲ ದೊರಕುವಂತಾಗಿದೆ. ವಿಪರ್ಯಾಸವೆಂದರೆ ಇದರಲ್ಲಿಯೂ ಮೊಬೈಲ್ ಗೇಮ್​ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಲ್ಲಿ ನಿರತರಾಗಿರುವ ಯುವ ಸಮೂಹ ಕ್ರಮೇಣವಾಗಿ ಓದುವ ಹವ್ಯಾಸಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಗ್ರಂಥಾಲಯವೊಂದು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿದೆ. ಹೌದು ಈ ಗ್ರಾಮದಲ್ಲಿ ಗ್ರಾಮಪಂಚಾಯತ್ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿದೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ.

ಇಲ್ಲಿವೆ 5 ಸಾವಿರಕ್ಕೂ ಅಧಿಕ ಪುಸ್ತಕಗಳು: ಮಕ್ಕಳಿಗಾಗಿ ವಿಶೇಷ ವಿಭಾಗ ತೆರೆಯಲಾಗಿದ್ದು ಇಲ್ಲಿ ಮಕ್ಕಳು ಕೇರಂ, ಚೆಸ್ ಸೇರಿದಂತೆ ವಿವಿಧ ಆಟಗಳನ್ನು ಕಲಿಯಲು ಓದಲು ಅವಕಾಶ ಕಲ್ಪಿಸಲಾಗಿದೆ. ಗ್ರಂಥಾಲಯದಲ್ಲಿ 5 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಇಲ್ಲಿಯ ಕನ್ನಡ ಪುಸ್ತಕಗಳು ಗ್ರಾಮದ ಜನರ ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸುತ್ತಿವೆ. ಈ ಗ್ರಂಥಾಲಯದ ವಿಶೇಷ ಎಂದರೆ ಗ್ರಾಮದ ಹೊರವಲಯದಲ್ಲಿರುವ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸಹ ಇಲ್ಲಿಗೆ ವ್ಯಾಸಂಗ ಮಾಡಲು ಆಗಮಿಸುತ್ತಾರೆ.

ಮಕ್ಕಳನ್ನು ಕೈಬೀಸಿ ಕರೆಯುತ್ತಿರುವ ಗ್ರಂಥಾಲಯ: ಗ್ರಾಮದ ಯುವಕರು ವಿದ್ಯಾರ್ಥಿಗಳು ಮತ್ತು ವಯಸ್ಕರು ಸೇರಿದಂತೆ 1,850 ಜನರು ಗ್ರಂಥಾಲಯದಲ್ಲಿ ಹೆಸರು ನೊಂದಾಯಿಸಿದ್ದಾರೆ. ಮಕ್ಕಳ ವಿಭಾಗ ಸೇರಿದಂತೆ ಗ್ರಂಥಾಲಯದ ಪ್ರತಿಯೊಂದು ಗೋಡೆಗಳಲ್ಲಿ ಓದಿನ ಮಹತ್ವ ಸಾರುವ ಹೇಳಿಕೆಗಳು ಚಿತ್ರಗಳು ಗಮನ ಸೆಳೆಯುತ್ತವೆ. ಮಕ್ಕಳ ವಿಭಾಗದಲ್ಲಿ ಗಣೇಶ, ಸರಸ್ವತಿ ಮತ್ತು ಪರಮೇಶ್ವರ ದೇವರನ್ನು ಓದುತ್ತಿರುವ ಮಕ್ಕಳ ರೂಪದಲ್ಲಿ ಚಿತ್ರಿಸಲಾಗಿದ್ದು ಮಕ್ಕಳನ್ನು ಗ್ರಂಥಾಲಯಕ್ಕೆ ಕೈಬೀಸಿ ಕರೆಯುತ್ತವೆ.

ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಕಂಪ್ಯೂಟರ್ ವಿಭಾಗವಿದ್ದು ಇಲ್ಲಿ ಅಂತರ್ಜಾಲದಲ್ಲಿ ಪುಸ್ತಕಗಳನ್ನು ಓದುವ ವ್ಯವಸ್ಥೆ ಮಾಡಲಾಗಿದೆ. 6 ಕಂಪ್ಯೂಟರ್ ಮತ್ತು ಒಂದು ಲ್ಯಾಪಟಾಪ್ ಓದುಗರಿಗೆ ಸದಾ ತೆರೆದಿರುತ್ತೆ. ಗ್ರಂಥಾಲಯದಲ್ಲಿ ಸುಮಾರು 3,500 ಕ್ಕೂ ಅಧಿಕ ಪುಸ್ತಕಗಳನ್ನು ಇಡಲಾಗಿದೆ. ಡಿಜಿಟಲ್ ಗ್ರಂಥಾಲಯ ಸೇರಿದಂತೆ ಎರಡು ಗ್ರಂಥಾಲಯಗಳಲ್ಲಿ ಗಾಳಿ ಬೆಳಕು ವ್ಯವಸ್ಥೆ ಮಾಡಲಾಗಿದೆ. ಎರಡು ಕೊಠಡಿಗಳನ್ನು ಅಂದವಾಗಿ ಸಿಂಗಾರ ಮಾಡಲಾಗಿದ್ದು ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಗಮನ ಸೆಳೆಯುತ್ತೆ.

ಗ್ರಂಥಾಲಯಕ್ಕೆ ಬರುವ ಓದುಗರಿಗಾಗಿ ಸುವ್ಯವಸ್ಥಿತ ಶೌಚಾಲಯ ನಿರ್ಮಿಸಲಾಗಿದೆ. ಗ್ರಂಥಾಲಯಕ್ಕೆ ಕಾಲಿಡುತ್ತಿದ್ದಂತೆ ಸರಸ್ವತಿ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳ ಮೂರ್ತಿಗಳು ಗಮನ ಸೆಳೆಯುತ್ತವೆ. ಗ್ರಂಥಾಲಯದ ಹೊರಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ಗೌತಮ ಬುದ್ಧ ಮತ್ತು ವಿಜ್ಞಾನಿ ಅಬ್ದುಲ್ ಕಲಾಂ ಚಿತ್ರಗಳು ಗ್ರಂಥಾಲಯಕ್ಕೆ ಮೆರುಗು ನೀಡುತ್ತವೆ.

ಗ್ರಂಥಾಲಯದ ಹತ್ತಿರದಲ್ಲಿ ಗ್ರಾಮ ಪಂಚಾಯತ್ ಇದ್ದು ಪಂಚಾಯತ್ ಸದಸ್ಯರು, ಪಂಚಾಯತ್ ಕೆಲಸಕ್ಕಾಗಿ ಬರುವ ಗ್ರಾಮಸ್ಥರು ಗ್ರಂಥಾಲಯಕ್ಕೆ ಭೇಟಿ ನೀಡಿ ಮುಂದೆ ತೆರಳುತ್ತಾರೆ. ಒಟ್ಟಾರೆಯಾಗಿ ಹಾವೇರಿ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸುವಲ್ಲಿ ದೇವಗಿರಿ ಗ್ರಾಮ ಪಂಚಾಯತ್ ಯಶಸ್ಸಾಗಿದೆ


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ