ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ.
ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ ಪಟ್ಟಣದ ನಿಡಸೋಸಿ ರಸ್ತೆಯ ನಲವಡೆ ಪ್ಲಾಟ್ ದಲ್ಲಿರುವ ಜನ ನೋಟು ಎತ್ತಿಕೊಳ್ಳದೆ, ಗಾಬರಿಯಿಂದ ಪುರಸಭೆಗೆ ಕರೆ ಮಾಡಿ ತಿಳಿಸಿದ್ದಾರೆ.
ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆಯ ಮುಖ್ಯಾಧಿಕಾರಿಗಳಾದ ಜಗದೀಶ್ ಈಟಿ, ಪರಿಸರ ಅಭಿಯಂತರಾದ ನಾರಾಯಣ್ ನಾಯಕ್, ಕಿರಿಯ ಅಭಿಯಂತರಾದ ರವೀಂದ್ರ ಗಡಾದ, ಆರೋಗ್ಯ ವಿಭಾಗದ ವಿಶ್ವನಾಥ್ ಸೊಗಲದ ಹಾಗೂ ಶ್ರೀಧರ ಬೆಳವಿ ಪೋಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು 100 ರೂ. ನೋಟನ್ನು ಪರಿಶೀಲಿಸಿ ನೋಟಿಗೆ ಸ್ಯಾನಿಟೈಸರ್ ಸಿಂಪಡಿಸಿ ಪುರಸಭೆಗೆ ತೆಗೆದುಕೊಂಡು ಹೋಗಿದ್ದಾರೆ.