ಬೆಂಗಳೂರು: ಸರ್ಕಾರಿ ಅಧಿಕಾರಿಯ ಸೋಗಿನಲ್ಲಿ ವಂಚಕನೋರ್ವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಸುಧಾಮೂರ್ತಿ ಅವರಿಗೆ ಕರೆ ಮಾಡಿ ವೈಯಕ್ತಿಕ ಮಾಹಿತಿ ಕದಿಯಲು ಪ್ರಯತ್ನಿಸಿದ್ದು, ಈ ಸಂಬಂಧ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಧಾಮೂರ್ತಿ ಅವರ ಪರವಾಗಿ ಗಣಪತಿ ಎಂಬವರು ನೀಡಿದ ದೂರು ಆಧರಿಸಿ ಅಪರಿಚಿತ ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
“ಸೆ.5ರಂದು ಕೇಂದ್ರದ ಸರ್ಕಾರ ದೂರ ಸಂಪರ್ಕ ಇಲಾಖೆ ಅಧಿಕಾರಿಯ ಸೋಗಿನಲ್ಲಿ ಸುಧಾಮೂರ್ತಿ ಅವರಿಗೆ ಕರೆ ಮಾಡಿರುವ ವಂಚಕ ತನ್ನ ಬಗ್ಗೆ ಪರಿಚಯಿಸಿಕೊಂಡಿದ್ದ. ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲ. ಹೀಗಾಗಿ ವೈಯಕ್ತಿಕ ಮಾಹಿತಿ ನೀಡುವಂತೆ ಕೇಳಿದ್ದಾನೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾಹಿತಿ ನೀಡದಿದ್ದರೆ ಮೊಬೈಲ್ ನಂಬರ್ನ ಸಂಪರ್ಕ ಕಡಿತ: “ಲಿಂಕ್ ಆಗದ ನಿಮ್ಮ ಮೊಬೈಲ್ ನಂಬರ್ನಿಂದ ಅಶ್ಲೀಲ ವಿಡಿಯೋ ಪ್ರಸಾರವಾಗುತ್ತಿದೆ. ಇದನ್ನು ತಪ್ಪಿಸಲಾಗಿದೆ. ಮಾಹಿತಿ ನೀಡದಿದ್ದರೆ ಮೊಬೈಲ್ ನಂಬರ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ವೇಳೆ ಅಸಭ್ಯವಾಗಿಯೂ ವರ್ತಿಸಿದ್ದಾನೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೈಯಕ್ತಿಕ ಮಾಹಿತಿ ಪಡೆಯಲು ಯತ್ನ: “ಅನುಮಾನ ಬಂದು ಟ್ರೂ ಕಾಲರ್ನಲ್ಲಿ ಪರಿಶೀಲಿಸಿದಾಗ ಟೆಲಿಕಾಮ್ ಡಿಪಾರ್ಟ್ಮೆಂಟ್ ಎಂದು ತೋರಿಸಿದೆ. ನಕಲಿ ಅಧಿಕಾರಿಯ ಸೋಗಿನಲ್ಲಿ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಲು ಅನಾಮಿಕ ವ್ಯಕ್ತಿ ಪ್ರಯತ್ನಿಸಿದ್ದಾನೆ. ಹೀಗಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ದೂರಿನಲ್ಲಿ ಒತ್ತಾಯಿಸಲಾಗಿದೆ.