ಮಂಡ್ಯ: ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ನೀವು ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜೊತೆ ನಾನಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬಿಡದಿ ಟೌನ್‌ಶಿಪ್‌ಗೆ ರೈತರು ವಿರೋಧ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರಿಗೆ ಮಿಡಿಯುವುದು ಬಿಟ್ಟು ಈ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಾಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಆಶ್ರಯ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳೇ ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ ಎಂದರು.
9 ಸಾವಿರ ಎಕರೆ ಭೂಮಿಯನ್ನು ಟೌನ್‌ಶಿಪ್‌ಗೆ ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ರೈತರು ಇದಕ್ಕೆ ವಿರೋಧ ಇದ್ದಾರೆ. ನಾನು ರೈತರ ಪರ ಇದ್ದೇನೆ ಎಂದು ಸಚಿವರು ಹೇಳಿದರು.
ಕನಕಪುರದಲ್ಲಿ ಒಣಭೂಮಿ ಇದ್ರೆ ಅಲ್ಲಿ ಟೌನ್‌ಶಿಪ್ ಮಾಡಲಿ: ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿರಿ? ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ? ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್ ಮಾಡಬಹುದಲ್ಲವೇ? ರಾಜ್ಯದಲ್ಲಿ ಬೇರೆ ಬೇರೆ ಇಂತಹ ಒಣಭೂಮಿ ಬೇಕಾದಷ್ಟಿದೆ. ಅಲ್ಲೆಲ್ಲ ಮಾಡುವುದು ಬಿಟ್ಟು ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ? ಎಂದು ಪ್ರಶ್ನಿಸಿದರು.
Laxmi News 24×7