ಉಡುಪಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ಕ್ಕೆ ಉಡುಪಿಗೆ ಬರಲಿದ್ದಾರೆ. ಕೃಷ್ಣಮಠಕ್ಕೆ ಭೇಟಿ ನೀಡುವ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಭೇಟಿಯ ಜೊತೆಗೆ ಉಡುಪಿಯ “ಕೃಷ್ಣ ಕಾರಿಡಾರ್” ಯೋಜನೆಯ ಕನಸು ಚಿಗುರಿದೆ.
ನವೆಂಬರ್ 28ಕ್ಕೆ ಮೋದಿ ಉಡುಪಿ ಭೇಟಿ, ಭಕ್ತರನ್ನುದ್ದೇಶಿಸಿ ಮಾತು: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಉಡುಪಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಪರ್ಯಾಯ ಶ್ರೀ ಪುತ್ತಿಗೆ ಮಠದವರು ಆಯೋಜಿಸಿರುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ನವಂಬರ್ 28ರಂದು ನಡೆಯುವ ಈ ಕಾರ್ಯಕ್ರಮದಲ್ಲಿ, ಪ್ರಧಾನಿ ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಂದಾಜು 1 ಲಕ್ಷ ಕೃಷ್ಣ ಭಕ್ತರು ಸೇರುವ ನಿರೀಕ್ಷೆ ಇರುವ ಕಾರಣ ಈಗಾಗಲೇ ಪೂರ್ವಭಾವಿ ತಯಾರಿಗಳು ಶುರುವಾಗಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಬಂದು ಕಡಗೊಲು ಕೃಷ್ಣ ದೇವರ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ, ಬಳಿಕ ಸ್ವಾಮೀಜಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ನಂತರದಲ್ಲಿ ಕೃಷ್ಣಮಠದ ಆವರಣದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಚಿಗುರೊಡೆದ ಕೃಷ್ಣ ಕಾರಿಡಾರ್ ಕನಸು: ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನರೇಂದ್ರ ಮೋದಿಯವರು ಸುರಕ್ಷತೆಯ ಕಾರಣದಿಂದ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿರಲಿಲ್ಲ. ಇದೀಗ ಎಸ್ಪಿ ಹರಿರಾಮ ಶಂಕರ್ ನೇತೃತ್ವದಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಪ್ರಧಾನಿ ಭೇಟಿಯ ಜೊತೆಗೆ ಉಡುಪಿಯಲ್ಲಿ “ಕೃಷ್ಣ ಕಾರಿಡಾರ್” ನ ಕನಸು ಚಿಗುರಿದೆ. ಕಾಶಿ ಕಾರಿಡಾರ್ ಮಾದರಿಯಲ್ಲೇ ಕೃಷ್ಣ ಮಠದ ಪರಿಸರದಲ್ಲೂ ಸ್ವಚ್ಛತೆ ಹಾಗೂ ಪ್ರವಾಸಿಗರ ಮೂಲ ಸೌಕರ್ಯದ ನಿಟ್ಟಿನಲ್ಲಿ ಕೃಷ್ಣ ಕಾರಿಡಾರ್ನ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮಠಾಧೀಶರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಬೇಡಿಕೆ ಸಲ್ಲಿಸಲಿದ್ದಾರೆ. ಧಾರ್ಮಿಕ ಪ್ರವಾಸೋದ್ಯಮದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಜೊತೆಗೆ ಉಡುಪಿಗೊಂದು ಏರ್ಪೋರ್ಟ್ ಬೇಡಿಕೆಯೂ ಸಲ್ಲಿಕೆಯಾಗಲಿದೆ.
ಪ್ರಧಾನಿ ಉಡುಪಿ ಭೇಟಿ ಬಹುತೇಕ ಖಚಿತಗೊಂಡಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಪುತ್ತಿಗೆ ಶ್ರೀಗಳ ಎರಡು ವರ್ಷದ ಪರ್ಯಾಯ ಮಹೋತ್ಸವ ಸಮಾರೋಪ ಸಂದರ್ಭದಲ್ಲಿ, ಪ್ರಧಾನಿಗಳ ಭೇಟಿ ಮಹತ್ವ ಪಡೆದುಕೊಂಡಿದೆ. ಪುತ್ತಿಗೆ ಶ್ರೀಗಳ ವಿಶ್ವ ಪರ್ಯಾಯಕ್ಕೆ ವಿಶ್ವಗುರುವಿನ ಭೇಟಿ ಎಂದು ಬಣ್ಣಿಸಲಾಗುತ್ತಿದೆ.
Laxmi News 24×7