ಚಿಕ್ಕಬಳ್ಳಾಪುರ: ತಂದೆಯ ಅನಿರೀಕ್ಷಿತ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗದ ಪುತ್ರಿ ಪ್ರಾಣ ಬಿಟ್ಟಿದ್ದಾಳೆ. ತಂದೆಯ ಅಗಲಿಕೆಯ ನೋವು ತಳಲಾರದೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯಲ್ಲಿ ಘಟನೆ ನಡೆದಿದೆ. 22 ವರ್ಷದ ಸ್ವರ್ಣ ಆತ್ಮಹತ್ಯೆಗೆ ಶರಣಾಗಿದ ಯುವತಿ. ಈ ಘಟನೆ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮೃತ ಸ್ವರ್ಣ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೇಲ್ ರೂಮ್ನಲ್ಲಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಅಸ್ವಸ್ಥಗೊಂಡಿದ್ದ ಯುವತಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೂರು ತಿಂಗಳ ಹಿಂದೆ ತಂದೆ ಆತ್ಮಹತ್ಯೆ: ಮೂರು ತಿಂಗಳ ಹಿಂದೆ ಯುವತಿಯ ತಂದೆ ಆತ್ಮಹತ್ಯೆಗೆ ಶರಣಾಗಿದ್ದರು. ತಂದೆಯ ಅನಿರೀಕ್ಷಿತ ಸಾವು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲವೇ ತಿಂಗಳಲ್ಲಿ ಗಂಡ ಮತ್ತು ಪುತ್ರಿಯನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸಾವಿನಲ್ಲೂ ಒಂದಾದ ಅಣ್ಣ -ತಮ್ಮ: ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿಕ ಕಪರಟ್ಟಿ ಗ್ರಾಮದಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿತ್ತು. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಸತೀಶ ಬಾಗನ್ನವರ್ (16) ಅವರು ಅ.4 ಮುಂಜಾನೆ 4 ಗಂಟೆಗೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಈ ಸುದ್ದಿ ಕೇಳಿ ಮೃತ ಸತೀಶ್ ಅವರ ಅಣ್ಣ ಬಸವರಾಜ ಬಾಗನ್ನವರ್ (24) ಹೃದಯಾಘಾತದಿಂದ ಪ್ರಾಣಬಿಟ್ಟಿದ್ದರು.
ಸತೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆತ ಬದುಕುಳಿಯಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಬಸವರಾಜ ಅವರು ಕುಸಿದು ಬಿದ್ದಿದ್ದರು. ಆಗ ಬಸವರಾಜ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ಸತೀಶ್ ಅವರ ಸಾವಿನ ಸುದ್ದಿ ಬಂದಿದೆ. ಈ ಸುದ್ದಿ ಕೇಳಿದ ತಕ್ಷಣವೇ ಬಸವರಾಜ ಹೃದಯಾಘಾತದಿಂದ ಉಸಿರು ಚೆಲ್ಲಿದ್ದರು. ಇಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿರುವುದು ಅವರ ತಂದೆ – ತಾಯಿಗೆ ಬರಸಿಡಿಲು ಬಡಿದಂತೆ ಆಗಿತ್ತು.
ಇನ್ನು ಕಳೆದ ತಿಂಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಕೊಪ್ಪ ಕ್ರಾಸ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮದುವೆಯಾಗಬೇಕಿದ್ದ ಜೋಡಿ ಮೃತಪಟ್ಟಿದ್ದರು. ಒಟ್ಟಿಗೆ ಬಾಳಿ ಬದುಕಬೇಕಾದ ಜೋಡಿ ಮದುವೆಗೂ ಮುನ್ನವೇ ಸಾವಿನಲ್ಲಿ ಒಂದಾಗಿತ್ತು. ಬಸವನಗೌಡ (24) ಹಾಗೂ ರೇಖಾ (22) ಮೃತಪಟ್ಟವರು