ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ; ಆದೇಶ ಪಾಲಿಸದಿದ್ರೆ ಕಠಿಣ ಕ್ರಮ- ಪ್ರಲ್ಹಾದ್ ಜೋಶಿ
ನವದೆಹಲಿ/ಹುಬ್ಬಳ್ಳಿ: ಖಾದ್ಯ ತೈಲ ವಲಯದಲ್ಲಿ ಹೆಚ್ಚಿನ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರ 2011ರ VOPPA ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ತರಕಾರಿ ತೈಲ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ (ನಿಯಂತ್ರಣ) ಆದೇಶ-2011 (VOPPA)ಕ್ಕೆ ಪ್ರಮುಖ ತಿದ್ದುಪಡಿ ಆಗಿದೆ. ತಿದ್ದುಪಡಿ ಮಾಡಲಾದ VOPPA ಆದೇಶ-2025 ಭಾರತದಲ್ಲಿ ಖಾದ್ಯ ತೈಲ ವಲಯದಾದ್ಯಂತ ನಿಯಂತ್ರಕ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆ ಗುರಿ ಹೊಂದಿದೆ ಎಂದರು.
ನೋಂದಣಿ ಕಡ್ಡಾಯ: ತಿದ್ದುಪಡಿ ಆದೇಶದಂತೆ ಖಾದ್ಯ ತೈಲ ಪೂರೈಕೆಯಲ್ಲಿ ಭಾಗಿಯಾಗಿರುವ ಎಲ್ಲ ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯ. ಅಲ್ಲದೇ, ಆನ್‌ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್ ಸಲ್ಲಿಕೆಯೂ ಸಹ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಖಾದ್ಯ ತೈಲ ಸಂಬಂಧಿತ ಘಟಕಗಳು https://www.nsws.gov.in ನಲ್ಲಿ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆ ಮೂಲಕ ನೋಂದಾಯಿಸಿಕೊಳ್ಳಬೇಕು. ನಂತರ, ಘಟಕಗಳು ಮಾಸಿಕ ಉತ್ಪಾದನೆ, ಸ್ಟಾಕ್ ಮತ್ತು ಲಭ್ಯತೆಯ ರಿಟರ್ನ್‌ಗಳನ್ನು https://www.edibleoilindia.in ಮೂಲಕ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.ಖಾದ್ಯ ತೈಲ ವಲಯದಲ್ಲಿ ನಿಖರ ದತ್ತಾಂಶ ಸಂಗ್ರಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ನೀತಿಗಳ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಣಾಯಕ ಹೆಜ್ಜೆ ಇರಿಸಿದೆ. ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆಗೆ ಯೋಜಿಸಿದ್ದು, ಎಣ್ಣೆ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ ಬಗೆಗಿನ ಕ್ರಮವನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.