ಉಡುಪಿ: ‘ಕೆಜಿಎಫ್ ಚಾಚಾ’ ಖ್ಯಾತಿಯ ಹರೀಶ್ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ ನೆರವೇರಿತು. 2022ರಲ್ಲಿ ತಗುಲಿದ್ದ ಕ್ಯಾನ್ಸರ್ ಕಳೆದ ಕೆಲ ತಿಂಗಳುಗಳಲ್ಲಿ ಉಲ್ಬಣಗೊಂಡು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್, ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ನಿಧನರಾದರು.
ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ, ಅಕಾಲಿಕ ಮರಣ ಹೊಂದಿದ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರ ಹುಟ್ಟೂರಲ್ಲಿ ನಡೆದಿದೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ, ಅಂಬಲಪಾಡಿಯ ಮೂಲ ಮನೆಯಲ್ಲಿ ಅಂತಿಮ ವಿಧಿ-ವಿಧಾನಗಳು ನಡೆದವು.
ಬೆಂಗಳೂರಿನಲ್ಲಿ ಗುರುವಾರ ಕೊನೆಯುಸಿರೆಳೆದ ಅವರ ಪಾರ್ಥಿವ ಶರೀರವನ್ನು ತಡರಾತ್ರಿ ಹುಟ್ಟೂರಿಗೆ ತರಲಾಯಿತು. ಅಂಬಲಪಾಡಿ ಮನೆಯ ತುಳಸಿ ಕಟ್ಟೆ ಮುಂಭಾಗದಲ್ಲಿ, ಅರ್ಚಕರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ಜರುಗಿದವು. ಆಪ್ತರು, ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.
ಅಂತಿಮ ದರ್ಶನ, ವಿಧಿ-ವಿಧಾನಗಳ ಬಳಿಕ ಪಾರ್ಥಿವ ಶರೀರವನ್ನು ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹಿಂದೂ ರುದ್ರಭೂಮಿಗೆ ಕೊಂಡೊಯ್ಯಲಾಯಿತು. ಹರೀಶ್ ರಾಯ್ ಮೃತದೇಹಕ್ಕೆ ಸಹೋದರ ಸತೀಶ್ ಹಾಗೂ ಪುತ್ರರಾದ ರೋನಿತ್ ರಾಯ್, ರೋಷನ್ ರಾಯ್ ಅಗ್ನಿಸ್ಪರ್ಶ ಮಾಡಿದರು. ಅಲ್ಲಿ ನೆರೆದಿದ್ದವರು ಕಣ್ಣೀರಾದರು.
Laxmi News 24×7