ಕಲಬುರಗಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ. ಅತಿವೃಷ್ಠಿ ಮತ್ತು ಭೀಮಾ ನದಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದರೆ, ಇನ್ನೊಂದೆಡೆ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದಡೆ ರಾಶಿ ಮಾಡಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಹೆಸರು ನೀರು ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. ಆದರೆ, ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಕ್ಕದಲ್ಲಿದ್ದ ಬೃಹತ್ ಹಳ್ಳ ಉಕ್ಕಿ ಹರಿದು ದರ್ಗಾ ಆವರಣ ಸಂಪೂರ್ಣ ಜಲಾವೃತವಾಗಿದೆ.
ಪರಿಣಾಮವಾಗಿ ರೈತರು ಬೆಳೆದ ಹೆಸರು ನೀರಿನಲ್ಲಿ ನೆನೆದು ಲಕ್ಷಾಂತರ ರೂ. ಮೌಲ್ಯದ 300 ಕ್ವಿಂಟಲ್‌ಗೂ ಅಧಿಕ ಹೆಸರು ಬೆಳೆ ಜಲಪಾಲಾಗಿದೆ. ಹೆಸರು ಕಳೆದುಕೊಂಡ ನೂರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರ ನೆರವಿಗೆ ಬರಬೇಕು ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.ಭೀಮಾನದಿ ಪ್ರವಾಹಕ್ಕೆ ರೈತರು ತತ್ತರ: ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಪರಿಣಾಮವಾಗಿ ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿದು ನೂರಾರು ರೈತರ ಸಾವಿರಾರು ಎಕರೆ ಜಮೀನುಗಳು ಜಲಾವೃತವಾಗಿವೆ. ಅಫಜಲಪುರ ತಾಲೂಕಿನ ಘತ್ತರಗಿ, ತೆಲ್ಲೂರ್, ದೇವಲಗಾಣಗಾಪುರ, ಮಣ್ಣೂರು, ಬಂಕಲಗಾ ಸೇರಿ 94 ಹಳ್ಳಿಗಳಲ್ಲಿ ತೊಗರಿ, ಉದ್ದು, ಹೆಸರು, ಸೋಯಾ, ಹತ್ತಿ ಸೇರಿ ಮುಂಗಾರು ಬೆಳೆಗಳು ಸರ್ವನಾಶವಾಗಿವೆ.