ಉಡುಪಿ: ಅರಬ್ಬೀ ಸಮುದ್ರ ಕಳೆದ ಒಂದೆರಡು ವರ್ಷಗಳಿಂದ ಆತಂಕದ ಸಮುದ್ರ ಆಗ್ತಿದೆ. ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ದಡದಿಂದ ಹೊರಟು 15 ದಿನ ಸಮುದ್ರದಲ್ಲಿ ಜೀವನ ಮಾಡೋ ಕಡಲ ಮಕ್ಕಳು ಇದೀಗ ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಮೋದಿ ಸರ್ಕಾರದ ಮೀನುಗಾರಿಕಾ ಸಚಿವಾಲಯದ ಕದ ತಟ್ಟಿದ್ದಾರೆ.
ಅರಬ್ಬೀ ಸಮುದ್ರ ಒಂದು ಕಾಲದಲ್ಲಿ ಸೇಫ್ ಸಮುದ್ರ ಎಂಬ ಖ್ಯಾತಿ ಪಡೆದಿತ್ತು.
ಕಡಲ ಮಕ್ಕಳು ಕಸುಬು ಮಾಡಿ ಜೀವನ ನಡೆಸುತ್ತಿದ್ರು. ಇತ್ತೀಚಿನ ವರ್ಷಗಳಲ್ಲಿ ಅರಬ್ಬೀ ಸಮುದ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ನಿರಂತರವಾಗಿ ಅರಬ್ಬಿ ಸಮುದ್ರದಲ್ಲಿ ದೋಣಿ ದುರಂತ.. ಆಳ ಸಮುದ್ರ ಮೀನುಗಾರಿಕೆ ಬೋಟುಗಳ ದುರಂತ ಸಂಭವಿಸುತ್ತಿವೆ.
ವರ್ಷದ ಹಿಂದೆ ಸುವರ್ಣ ತ್ರಿಭುಜ ಬೋಟ್‌ನಲ್ಲಿ ಕಣ್ಮರೆಯಾದ 7 ಮಂದಿ ಇನ್ನೂ ಸಿಕ್ಕಿಲ್ಲ. ಮರವಂತೆಯಲ್ಲಿ ನಡೆದ ದೋಣಿ ದುರಂತದಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಂಗೊಳ್ಳಿಯಲ್ಲಿ ದೋಣಿ ದುರಂತದಲ್ಲಿ ಮೀನುಗಾರರು ಪಾರಾಗಿ, ಬೋಟ್ ಮುಳುಗಿದೆ. ಮಲ್ಪೆಯಲ್ಲಿ 3 ಪರ್ಷಿಯನ್ ಬೋಟ್‌ಗಳು ಅಲೆಯ ಹೊಡೆತಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೀಗೆ ಮೇಲಿಂದ ಮೇಲೆ ದುರ್ಘಟನೆಗಳು ನಡೆಯುತ್ತಿವೆ. ಇದನ್ನೆಲ್ಲಾ ತಡೆಗಟ್ಟಲು ತಂತ್ರಜ್ಞಾನದ ಆವಿಷ್ಕಾರದ ಅಗತ್ಯತೆ ಇದೆ.
ಆಳ ಸಮುದ್ರ ಮೀನುಗಾರಿಕೆಗೆ ಬಂದರಿನಿಂದ ಬೋಟ್ ಹೊರಟ್ರೆ ಮತ್ತೆ ವಾಪಸ್ ಆಗಲು 15 ದಿನ ಬೇಕು. ಮುಂಜಾನೆ ತೆರಳಿ ಸಂಜೆ ವಾಪಸ್ಸಾಗುವ ಮೀನುಗಾರಿಕೆ ಕೂಡ ಉಡುಪಿಯಲ್ಲಿ ನಡೆಯುತ್ತಿದೆ. ಮೀನುಗಾರಿಕೆಗೆ ತೆರಳಿದ ಸಂದರ್ಭ ಸಾವಿರಾರು ಜನ ಕುಟುಂಬದ ಜತೆ ಬಂದರಿನ ಜತೆ ಸಂಪರ್ಕವನ್ನ ಕಳೆದುಕೊಳ್ಳುತ್ತಾರೆ. ಪ್ರಾಕೃತಿಕ ವೈಪರಿತ್ಯ ನಡೆದಾಗ ಸಂಪರ್ಕ ಮಾಡೋದು ಸಾಧ್ಯವಾಗಲ್ಲ. ಪ್ರಾಣ ರಕ್ಷಣೆಗೆ ಅಗತ್ಯ ಮಾಹಿತಿ ರವಾನೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನ ಬೋಟಿಗೆ ಅಳವಡಿಸಬೇಕು ಅನ್ನೋ ಒತ್ತಾಯ ಕೇಳಿಬರ್ತಿದೆ.
ಕೇಂದ್ರ ಸರ್ಕಾರದ ಮೀನುಗಾರಿಕಾ ಸಚಿವಾಲಯ, ರಾಜ್ಯ ಸರ್ಕಾರ ಬಂದರು ಮತ್ತು ಮೀನುಗಾರಿಕಾ ಇಲಾಖೆ ಮುತುವರ್ಜಿ ವಹಿಸೋ ಅಗತ್ಯವಿದೆ. ಉಪಗ್ರಹ ಆಧಾರಿತ ತಂತ್ರಜ್ಞಾನ ಮೊಬೈಲ್ ಡಿವೈಸ್ ಮೂಲಕ ಅಳವಡಿಕೆಯಾಗಬೇಕಿದೆ.