ಬೆಂಗಳೂರು,ಜೂ.22- ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ದಸರಾವರೆಗೂ ಶಾಲಾಕಾಲೇಜುಗಳನ್ನು ತೆರೆಯದಿರಲು ಸರ್ಕಾರ ತೀರ್ಮಾನಿಸಿದೆ.
ದಸರಾ ಹಬ್ಬ ಮುಗಿದ ನಂತರವೇ ಪದವಿ,ಪದವಿಪೂರ್ವ, ಪ್ರೌಢಶಾಲೆ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳನ್ನು ಪರಿಸ್ಥಿತಿಗನುಗುಣವಾಗಿ ಆರಂಭಿಸುವುದು ಹಾಗೂ ನರ್ಸರಿ ಶಾಲೆಗಳನ್ನು ಜನವರಿವರೆಗೂ ತೆರೆಯದಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ
ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಶಾಲೆಗಳು 2020-21ನೇ ಸಾಲಿನ ಮೊದಲಾರ್ಧದ ಶೈಕ್ಷಣಿಕ ಅವಧಿಯನ್ನು ಪ್ರಾರಂಭಿಸದೆ ಸರ್ಕಾರದ ಸೂಚನೆ ಬರುವವರೆಗೂ ತೆರೆಯಬಾರದೆಂಬ ಸೂಚನೆ ಕೊಡಲಿದೆ. ಸದ್ಯ 1ರಿಂದ 5ನೇ ತರಗತಿವರೆಗೆ ಮಾತ್ರ ಆನ್‍ಲೈನ್ ಶಿಕ್ಷಣವನ್ನು ರದ್ದುಪಡಿಸಲಾಗಿದ್ದು, 6ರಿಂದ ಉಳಿದ ತರಗತಿಗಳನ್ನು ಸಾಧ್ಯವಾದಷ್ಟು ಆನ್‍ಲೈನ್‍ನಲ್ಲೇ ನಡೆಸಲು ಸರ್ಕಾರ ಆದೇಶ ಮಾಡಲಿದೆ