ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆಯಾಗಿದೆ. ಈ ಹಿನ್ನೆಲೆ ಹಲವು ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗ್ತಿದೆ.
ಬಸವಸಾಗರ ಜಲಾಶಯದಿಂದ 1,82,290 ಕ್ಯೂಸೆಕ್ ನೀರು ಬಿಡುಗಡೆ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. 11 ಗೇಟ್ಗಳ ಮೂಲಕ 1,82,290 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 33.313 ಟಿಎಂಸಿ. ಈಗಾಗಲೇ 28.570 ಟಿಎಂಸಿ ನೀರು ಸಂಗ್ರಹವಾಗಿದೆ. ಸಾಯಂಕಾಲದ ವೇಳೆಗೆ 2.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನೀರು ಹೊರಬಿಡಲಾಗುತ್ತಿರುವ ಹಿನ್ನೆಲೆ ನದಿ ತೀರದ ಜನರು ಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ನವಿಲುತೀರ್ಥ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರೋ ಹಿನ್ನೆಲೆ ನವಿಲುತೀರ್ಥ ಜಲಾಶಯದಿಂದಲೂ ನೀರು ಬಿಡುಗಡೆ ಮಾಡಲಾಗಿದೆ. ಸವದತ್ತಿ ತಾಲೂಕಿನ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಡ್ಯಾಂನಿಂದ ಮೂರು ಗೇಟ್ ಮೂಲಕ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನೀರು ಬಿಡುಗಡೆ ಹಿನ್ನೆಲೆ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಬಿನಿ ಜಲಾಶಯದಿಂದ ನಿನ್ನೆ ತಡರಾತ್ರಿ 70,600 ಕ್ಯೂಸೆಕ್ ನೀರನ್ನ ಹೊರ ಬಿಡಲಾಗಿತ್ತು. ಜಲಾಶಯದ ನೀರಿನ ಮಟ್ಟ ಇಂತಿದೆ
- ಒಳ ಹರಿವು 62,816 ಕ್ಯೂಸೆಕ್
- ಹೊರ ಹರಿವು 63,100 ಕ್ಯೂಸೆಕ್
- ಡ್ಯಾಂನ ಗರಿಷ್ಟ ಮಟ್ಟ 2284 ಅಡಿ, ಸದ್ಯದ ಮಟ್ಟ 2278 ಅಡಿ
- ಡ್ಯಾಂನ ಒಟ್ಟು ಸಾಮರ್ಥ್ಯ 19.52 ಟಿಎಂಸಿ, ಸದ್ಯ 15.92 ಟಿಎಂಸಿ ನೀರು ಸಂಗ್ರಹ
- ಇಂದು ಬೆಳಿಗ್ಗೆಯಿಂದ 7500 ಕ್ಯೂಸೆಕ್ ಹೊರ ಹರಿವು ಕಡಿತ
ತುಂಗಾ ಜಲಾಶಯದಿಂದ 71,517 ಕ್ಯೂಸೆಕ್ ನೀರು ಬಿಡುಗಡೆ
ಮಲೆನಾಡಿನಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರೆದಿದ್ದು, ತುಂಗಾ, ಶರಾವತಿ, ಮಾಲತಿ, ವರದಾ, ಕುಮದ್ವತಿ, ಶರ್ಮಣಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಕೆರೆ ಕೋಡಿ ಒಡೆದು ತೋಟ ಹಾಗೂ ಗದ್ದೆಗೆ ನೀರು ನುಗ್ಗಿದೆ. ಇದರಿಂದ ಆಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ತುಂಗಾ ನದಿ ರಭಸದಿಂದ ಹರಿಯುತ್ತಿದೆ. ಗಾಜನೂರಿನ ತುಂಗಾ ಜಲಾಶಯದಿಂದ 71,517 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.