Breaking News

ರಾಯಚೂರು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ – ಗರಿಗೆದರಿದ ಕೃಷಿ ಚಟುವಟಿಕೆಗಳು

Spread the love

ರಾಯಚೂರು(ಏ.27): ಕೊರೋನಾ ಸೋಂಕಿನಿಂದ ದೂರವಿರುವ ರಾಯಚೂರು ಜಿಲ್ಲೆಯಲ್ಲಿ ಈಗ ಲಾಕ್ ಡೌನ್ ಸಡಿಲಿಕೆಯಾಗಿದೆ. ಈ ಮಧ್ಯೆ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇಲ್ಲಿ ಕೃಷಿಕರ ಫಸಲು ಮಾರಾಟಕ್ಕೆ ನೇರವಾಗಿ ಮಿಲ್ ಗಳಿಗೆ ಕಳುಹಿಸಲಾಗುತ್ತಿದೆ. 

ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೋನಾ ರಾಯಚೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮುಕ್ತವಾಗಿದೆ. ಕೊರೋನಾ ಇಲ್ಲದ ಕಾರಣ ಜಿಲ್ಲೆಯು ಈಗ ಗ್ರೀನ್ ಝೋನ್​  ನಲ್ಲಿದ್ದು, ಈಗ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಇಲ್ಲಿ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಮುಖ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಭತ್ತ, ಮೆಣಸಿನಕಾಯಿ, ತೊಗರಿ, ಜೋಳ, ಈರುಳ್ಳಿಯನ್ನು ರೈತರು ಬೆಳೆದಿದ್ದರು, ಈ ಸಂದರ್ಭದಲ್ಲಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಸ್ವಲ್ಪ ಸಮಯ ಅಡ್ಡಿಯಾಗಿತ್ತು. ಎಪಿಎಂಸಿಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಇಲ್ಲಿಗೆ ಬರುವ ರೈತರು ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿಲ್ಲ, ಈ‌ ಹಿನ್ನೆಲೆಯಲ್ಲಿ ಈಗ ಭತ್ತ, ತೊಗರಿಯನ್ನು ನೇರವಾಗಿ ಮಿಲ್ ಗಳಿಗೆ ಕಳುಹಿಸಲಾಗುತ್ತಿದೆ.

ಲಾಕ್ ಡೌನ್ ಆದ ನಂತರ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 412536 ಕ್ವಿಂಟಾಲ್ ಭತ್ತ, 14822 ಕ್ವಿಂಟಾಲ್ ಈರುಳ್ಳಿ, 19413 ಕ್ವಿಂಟಾಲ್ ಜೋಳ, 3555 ಕ್ವಿಂಟಾಲ್ ತೊಗರಿ, 4864 ಕ್ವಿಂಟಾಲ್ ಶೇಂಗಾ ಮಾರಾಟವಾಗಿದೆ. ರಾಯಚೂರಿಗೆ ಆಂಧ್ರ ಹಾಗು ತೆಲಂಗಾಣದಿಂದ ಫಸಲನ್ನು ರೈತರು ಮಾರಾಟ ಮಾಡಲು ತರುತ್ತಿದ್ದರು, ಈ ರಾಜ್ಯಗಳಲ್ಲಿ ಕೊರೋನಾ ಆಧಿಕವಾಗಿರುವುದರಿಂದ ಈ ಎರಡು ರಾಜ್ಯಗಳ ಫಸಲು ಮಾರಾಟ ನಿರ್ಬಂಧಿಸಲಾಗಿದೆ.

ರೈತರಿಗೆ ಫಸಲು ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ, ಈಗ ನೇರವಾಗಿ ಮಿಲ್ ಗಳಿಗೆ ಫಸಲು ತೆಗೆದುಕೊಂಡು ಹೋಗುವುದರಿಂದ ಉತ್ತಮ ದರ ಸಿಗುವುದಿಲ್ಲ. ಅಲ್ಲದೆ ರೈತರ ಕೃಷಿ ಚಟುವಟಿಕೆಗೆ ಬಳಕೆಯಾಗುವ ಯಂತ್ರಗಳಿಗೆ ಡಿಸೇಲ್ ಪೂರ್ಣ ಪ್ರಮಾಣದಲ್ಲಿ ನೀಡುತ್ತಿಲ್ಲ, ರೈತರು‌ ಮಾರುಕಟ್ಟೆಗೆ ತರಲು ಮುಕ್ತ ಅವಕಾಶ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈ ಮಧ್ಯೆ ರಾಯಚೂರು ಜಿಲ್ಲೆಯಲ್ಲಿ ಜೋಳ, ಕಡಲೆ, ತೋಗರಿ ಹಾಗೂ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಈ ತಿಂಗಳು ಅಂತ್ಯದವರೆಗೂ ರೈತರು ಹೆಸರು ನೊಂದಾಯಿಸಿಕೊಳ್ಳಬಹುದು. ಇಲ್ಲಿಯವರೆಗೂ 783 ರೈತರು 29445 ಕ್ವಿಂಟಾಲ್ ಜೋಳ ಮಾರಾಟ ಮಾಡಲು ನೊಂದಾಯಿಸಿಕೊಂಡಿದ್ದು, ಈಗಾಗಲೇ 183 ರೈತರು 7336 ಕ್ವಿಂಟಾಲ್ ಮಾರಾಟ ಮಾಡಿದ್ದಾರೆ. ಇನ್ನೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಈ ಮಧ್ಯೆ ಬೇಸಿಗೆ ಹಂಗಾಮು‌ ಮುಗಿದು ಮುಂಗಾರು ಹಂಗಾಮು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಒಟ್ಟು 2.53 ಲಕ್ಷ ಹೆಕ್ಟರ್ ಪ್ರದೇಶದ ಬಿತ್ತನೆಗಾಗಿ 38,447 ಕ್ವಿಂಟಾಲ್ ಬೀಜ ಬೇಕಾಗಿದ್ದು ಈಗ ಜಿಲ್ಲೆಯಲ್ಲಿ 32385 ಕ್ವಿಂಟಾಲ್ ಬೀಜ ಲಭ್ಯವಿದೆ. ರಸಗೊಬ್ಬರ 17,1917 ಕ್ವಿಂಟಾಲ್ ಬೇಡಿಕೆ ಇದ್ದು, ಈಗ 65472 ಕ್ವಿಂಟಾಲ್ ಲಭ್ಯವಿದೆ. ರಸಗೊಬ್ಬರ, ಬೀಜ ಮಾರಾಟಕ್ಕೆ ಅವಕಾಶ ನೀಡಿದ್ದರೂ ರೈತರು ಲಾಕ್ ಡೌನ್ ಹಿನ್ನೆಲೆಯಲ್ಲಿ ‌ಖರೀದಿಸಲು ಬರುತ್ತಿಲ್ಲ. ಅವರಿಗೆ ಪಾಸ್ ನೀಡಬೇಕೆಂದು ವ್ಯಾಪಾರಸ್ಥರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಗ್ರೀನ್ ಝೋನ್​ ನಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅಲ್ಪ ಅಡೆ ತಡೆಗಳಿದ್ದರೂ ಕೃಷಿ ಚಟುವಟಿಕೆಗೆ ಅವಕಾಶ ನೀಡಿದ್ದಾರೆ, ಇದರಿಂದ ರೈತರು ಆಗುತ್ತಿರುವ ನಷ್ಟ ಕಡಿಮೆಯಾದಂತಾಗಿದೆ.


Spread the love

About Laxminews 24x7

Check Also

ಏಳು ತಿಂಗಳ ಬಾಕಿ ಸಂಬಳ ಕೊಡಿ’

Spread the love ರಾಯಚೂರು: ‘ಜಿಲ್ಲೆಯಲ್ಲಿ ವಿವಿಧ ವೃಂದ ಹೊರ ಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ಏಳು ತಿಂಗಳ ವೇತನವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ