ಉಡುಪಿ: ಮಂಡ್ಯ ಜಿಲ್ಲೆ ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಖಾತ್ರಿ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಪೆಟ್ರೋಲ್ ಪಂಪನ್ನು ಸೀಲ್ ಮಾಡಲಾಗಿದೆ.
ಖರ್ಜೂರ ತುಂಬಿದ ಗೂಡ್ಸ್ ಲಾರಿ ಹತ್ತಿಕೊಂಡು ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಆವರಿಸಿತ್ತು. ಆತ ದಾರಿ ನಡುವೆ ಉಡುಪಿಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಸ್ಟೇಷನ್ ನಲ್ಲಿ ಸ್ನಾನ ಮಾಡಿ ಊಟ ಮಾಡಿ ಕೊಂಚ ವಿರಮಿಸಿದ್ದ. ಹೀಗಾಗಿ ಉಡುಪಿಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ತೆಕ್ಕಟ್ಟೆ ಶಿವಪ್ರಸಾದ್ ಪೆಟ್ರೋಲ್ ಬಂಕನ್ನು ರಾತ್ರೋರಾತ್ರಿ ಜಿಲ್ಲಾಡಳಿತ ಸೀಲ್ ಮಾಡಿದೆ. ಟಿಫನ್ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ ಕುಂದಾಪುರ ಪೊಲೀಸರು, ಟೋಲ್ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಪೆಟ್ರೋಲ್ ಬಂಕ್, ಬಹಳಷ್ಟು ಜನ ಓಡಾಡುವ ಏರಿಯಾ ಇದಾಗಿದೆ. ಹಾಗಾಗಿ ಆತಂಕ ಮನೆಮಾಡಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಗಡಿಯನ್ನು ಸೀಲ್ ಮಾಡಿದ್ದರೂ ಗೂಡ್ಸ್ ಬಿಡಬೇಕಾಗುತ್ತದೆ. ಲಾರಿ, ಟ್ಯಾಂಕರಲ್ಲಿ ಅವಿತುಕುಳಿತು ಪ್ರಯಾಣ ಮಾಡುವವರ ಮೇಲೆ ಕೂಡಾ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.