ನವದೆಹಲಿ: ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳು ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆಯೇ ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಾಫೆಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ‘ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿವೆ. ರಾಫೆಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ‘ಈ ಬಹುಪಯೋಗಿ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಸಾಮರ್ಥ್ಯಗಳಲ್ಲಿ ಕ್ರಾಂತಿಯನ್ನುಂಟು ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಫ್ರಾನ್ಸ್ ನಿಂದ ಸುರಕ್ಷಿತವಾಗಿ ರಾಫೆಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದ ಭಾರತೀಯ ವಾಯುಸೇನೆಯ ಪೈಲಟ್ ಗಳನ್ನೂ ಶ್ಲಾಘಿಸಿದ ರಾಜನಾಥ್ ಸಿಂಗ್ ಅವರು, ವಾಯುಸೇನೆಯ 17ನೇ ಸ್ಕ್ವಾಡ್ರನ್ ಮತ್ತು ಗೋಲ್ಡನ್ ಆರೋಸ್ ನ ವೃತ್ತಿಪರತೆ ಮತ್ತು ಶೌರ್ಯ ಹೀಗೆ ಮುಂದುವರೆಯಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಫ್ರಾನ್ಸ್ ಸರ್ಕಾರಕ್ಕೂ ಧನ್ಯವಾದ ಹೇಳಿರುವ ರಾಜನಾಥ್ ಸಿಂಗ್ ಅವರು, ನಿಗದಿತ ಸಮಯಕ್ಕೆ ಸರಿಯಾಗಿ ಯುದ್ಧ ವಿಮಾನಗಳನ್ನು ತಯಾರಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ. ಕೊರೋನಾ ಸಾಂಕ್ರಾಮಿಕ ಸೇರಿದಂತೆ ಸಾಕಷ್ಟು ಸಮಸ್ಯೆಗಳ ಹೊರತಾಗಿಯೂ ಯುದ್ಧ ವಿಮಾನ ಮತ್ತು ಅವರ ಆಯುಧಗಳನ್ನು ನಿಗದಿತ ಸಮಯದಲ್ಲಿ ಭಾರತಕ್ಕೆ ಹಸ್ತಾಂತರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಹೇಳಿರುವ ರಾಜನಾಥ್ ಸಿಂಗ್ ಅವರು, ರಾಫೆಲ್ ಯುದ್ಧ ವಿಮಾನ ಖರೀದಿ ಸಾಧ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರದಿಂದ. ಅಂತಾರಾಷ್ಟ್ರೀಯ ಮತ್ತು ಅಂತರ್ ಸರ್ಕಾರಿ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವ ಮೂಲಕ ಸೂಕ್ತ ಸಂದರ್ಭದಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದರು. ಆ ಮೂಲಕ ಸುಧೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯುದ್ಧ ವಿಮಾನ ಖರೀದಿ ಪ್ರಕ್ರಿಯೆನ್ನು ತ್ವರಿತಗೊಳಿಸಿದರು. ಅವರ ಧೈರ್ಯ ಮತ್ತು ನಿರ್ಣಾಯಕತೆಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್ ನಗರದ ಮೆರಿಗ್ನಾಕ್ ವಾಯು ನೆಲೆಯಿಂದ ಜುಲೈ 27ರಂದು ಭಾರತದತ್ತ ಮುಖ ಮಾಡಿದ್ದವು. ಬಳಿಕ 7 ತಾಸಿನ ಪ್ರಯಾಣ ಮುಗಿಸಿ, ಮಂಗಳವಾರ ಯುಎಇಯ ಅಲ್ ದಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿದ್ದವು. ಅಲ್ಲಿ ಯುದ್ಧ ವಿಮಾನಗಳ ಪೈಲಟ್ ಗಳು ವಿಶ್ರಾಂತಿ ಪಡೆದು, ಯುದ್ಧವಿಮಾನಕ್ಕೆ ಇಂಧನ ತುಂಬಿಸಿಕೊಂಡಿದ್ದರು. ಬಳಿಕ ಇಂದು ಬೆಳಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್ ಆಫ್ ಯುದ್ಧ ವಿಮಾನಗಳು ಭಾರತದತ್ತ ಮುಖ ಮಾಡಿದ್ದವು. ಇದೀಗ ಹರ್ಯಾಣ ಅಂಬಾಲಾ ಏರ್ ಬೇಸ್ ಗೆ ಬಂದಿಳಿದಿವೆ.