ನವದೆಹಲಿ, -ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಬೆಳಗಿನ ಉಪಾಹಾರವನ್ನೂ ಉಚಿತವಾಗಿ ನೀಡಲು ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯಲ್ಲಿ ಪ್ರಸ್ತಾಪಿಸಲಾಗಿದೆ.
ಶಾಲಾ ಮಕ್ಕಳಿಗೆ ಬೆಳಗ್ಗೆ ಪೌಷ್ಟಿಕಾಂಶವುಳ್ಳ ಉಪಾಹಾರ ನೀಡಬೇಕು. ಇದರಿಂದ ಮಕ್ಕಳ ಭೌತಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಿ ಇದು ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ದೇಶದ ವಿವಿಧ ರಾಜ್ಯಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡುವ ಯೋಜನೆ ಜಾರಿಯಲ್ಲಿದೆ. ಇದನ್ನು ಮುಂದುವರಿಸುವ ಜೊತೆ ಶಾಲಾ ಮಕ್ಕಳಿಗೆ ಬೆಳಗ್ಗೆ ಉಚಿತ ಪುಷ್ಟಿದಾಯಕ ಉಪಾಹಾರವನ್ನೂ ನೀಡಬೇಕೆಂದು ಎನ್‍ಇಪಿಯಲ್ಲಿ ತಿಳಿಸಲಾಗಿದೆ.
ಮಕ್ಕಳು ಪೌಷ್ಟಿಕಾಂಸ ಇರುವ ಆಹಾರವನ್ನು ಸೇವಿಸದಿದ್ದರೆ ಅಥವಾ ಅಸೌಖ್ಯತೆ ಹೊಂದಿದ್ದರೆ, ಅವರಲ್ಲಿ ಗರಿಷ್ಠ ಕಲಿಕೆ ಕೊರತೆ ಕಂಡುಬರುತ್ತದೆ.
ಆದಕಾರಣ, ಪೋಷಣೆ ಮತ್ತು ಆರೋಗ್ಯ (ಮಾನಸಿಕ ಆರೋಗ್ಯ)ಕ್ಕೆ ಆದ್ಯತೆ ನೀಡಬೇಕು.
ಹೀಗಾಗಿ ಮಕ್ಕಳಿಗೆ ಬೆಳಗ್ಗೆ ಪೌಷ್ಟಿಕಾಂಶ ಇರುವ ಉಪಾಹಾರ ನೀಡುವುದರಿಂದ ಅವರ ಅರಿವು ಮತ್ತು ಕಲಿಕೆ ಸಾಮಥ್ರ್ಯ ವೃದ್ದಿಯಾಗುತ್ತದೆ ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಲಾಗಿದೆ.
ಮಕ್ಕಳಿಗೆ ಆರೋಗ್ಯಕರ ಉಪಾಹಾರ ಮತ್ತು ಊಟದ ವ್ಯವಸ್ಥೆ ಜೊತೆಗೆ ಅವರ ಶಿಕ್ಷಣ ಕಲಿಕೆ ಹೆಚ್ಚಳಕ್ಕಾಗಿ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಆಪ್ತಸಮಾಲೋಚಕರು, ಸಮುದಾಯ ಸೇವೆಯಲ್ಲಿ ತೊಡಗುವವರನ್ನು ಬಳಸಿಕೊಳ್ಳಬೇಕೆಂದು ಹೊಸ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.