ಕಠ್ಮಂಡು: ಚೀನಾ ತನ್ನ ನೆರೆಯ ಎಲ್ಲ ದೇಶಗಳ ಗಡಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು ತಿಳಿದ ವಿಚಾರ. ಇತ್ತೀಚೆಗೆ ಭಾರತದೊಂದಿಗೆ ತಂಟೆ ತೆಗೆದಿದೆ. ಇದೀಗ ಇನ್ನೊಂದು ಭಯಾನಕ ಅಂಶವನ್ನು ನೇಪಾಳ ಸರ್ಕಾರ ಬಹಿರಂಗಪಡಿಸಿದೆ. ನೇಪಾಳದ ಬರೋಬ್ಬರಿ 10 ಪ್ರದೇಶಗಳನ್ನು ಚೀನಾ ಈಗಾಗಲೇ ಆಕ್ರಮಿಸಿಕೊಂಡಿದೆ ಎಂದು ನೇಪಾಳ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ಲಡಾಖ್‍ನ ಗಲ್ವಾನ್ ವ್ಯಾಲಿಯಲ್ಲಿ ಭಾರತದ-ಚೀನಾದ ಗಡಿ ತಂಟೆ ನಡೆದ ಕೆಲವೇ ದಿನಗಳ ನಂತರ ನೇಪಾಳ ಈ ಕುರಿತು ಸರ್ವೇ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ 10 ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಕುರಿತು ಬಹಿರಂಗವಾಗಿದೆ. ನೇಪಾಳದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲೆಂದೇ ಟಿಬೆಟ್‍ನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಂತರ ಮುಂದಿನ ದಿನಗಳಲ್ಲಿ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಉದ್ದೇಶಿಸಿದೆ.
ನೇಪಾಳದ ಕೃಷಿ ಸಚಿವಾಲಯದ ಸರ್ವೇ ಇಲಾಖೆ ಒಟ್ಟು 11 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ 10 ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ. ಸುಮಾರು 33 ಹೆಕ್ಟೇರ್‍ನಷ್ಟು ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತನ್ನ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ನದಿಗಳ ಹರಿವಿನ ದಿಕ್ಕನ್ನೂ ಬದಲಿಸಿದೆಯಂತೆ.
ಹುಮ್ಲಾ ಜಿಲ್ಲೆಯಲ್ಲಿ ಬಗ್ದಾರೆ ಖೊಲಾ ಹಾಗೂ ಕರ್ನಾಲಿ ನದಿಗಳನ್ನು ತಿರುಗಿಸಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಒಟ್ಟು 10 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅಲ್ಲದೆ ಟಿಬೆಟ್‍ನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ರಸುವಾ ಜಿಲ್ಲೆಯ ಸಿಂಜೆನ್, ಭುರ್ಜುಕ್ ಜಾಗೂ ಜಂಬು ಖೊಲಾ ಪ್ರದೇಶಗಳ ಮಾಡಿದ್ದು, ಇದರಿಂದಾಗಿ ಆರು ಹೆಕ್ಟೇರ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ.
ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತನ್ನ ರಸ್ತೆ ಸಂಪರ್ಕವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಈ ಮೂಲಕ ನೇಪಾಳದ ಕಡೆ ಹರಿಯುತ್ತಿದ್ದ ಕೆಲ ನದಿಗಳ ದಿಕ್ಕನ್ನು ಬದಲಿಸುತ್ತಿದೆ. ನದಿಗಳು ಕ್ರಮೇಣವಾಗಿ ನೇಪಾಳಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ನದಿಗಳು ನೇಪಾಳದ ಭೂಮಿಯ ಗರಿಷ್ಟ ಭಾಗ ಚೀನಾದ ಟೆಬೆಟ್ ವಶವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನದಿಗಳ ಹರಿವನ್ನು ಹೀಗೆ ಬದಲಿಸಿದರೆ ನೇಪಾಳದ ನೂರಾರು ಹೆಕ್ಟೇರ್ ಭೂಮಿ ಸ್ವಾಭಾವಿಕವಾಗಿ ಟೆಬೆಟ್‍ಗೆ ಒಳಪಡುತ್ತದೆ. ಕಾಲಾನಂತರದಲ್ಲಿ ಚೀನಾ ತನ್ನ ಸಶಸ್ತ್ರ ಪೊಲೀಸ್ ಪಡೆಗಳ ಮೂಲಕ ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಲಡಾಖ್‍ನ ಕಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನೇಪಾಳ ಈ ವರದಿಯನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚೀನಾದ ಪುಂಡಾಟಿಕೆ ಇಲ್ಲಿಗೇ ನಿಲ್ಲುವುದಲ್ಲ ವಿಯಟ್ನಾಂ, ಮಲೇಶಿಯಾ, ತೈವಾನ್ ದೇಶಗಳ ಗಡಿ ವಿಚಾರದಲ್ಲಿ ಸಹ ವಿವಾದ ಹೊಂದಿದೆ.