ನವದೆಹಲಿ : ಇತ್ತೀಚಿಗೆ ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ನಡೆಸಿದ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸತತ ಮೂರನೇ ಬಾರಿಗೆ ಭಾರತದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಮೊದಲನೆಯವರಾಗಿ ಸ್ಥಾನ ಪಡೆದಿದ್ದಾರೆ.
ಯೋಗಿ ಆದಿತ್ಯನಾಥ್ ಒಟ್ಟು ಮತಗಳ ಪೈಕಿ ಶೇಕಡಾ 24 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿ ಸತತ ಮೂರನೇ ಬಾರಿಗೆ ‘ಅತ್ಯುತ್ತಮ ಸಿಎಂ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಇತ್ತೀಚಿನ ಎಂಒಟಿಎನ್ ಸಮೀಕ್ಷೆಯೊಂದು ತಿಳಿಸಿದೆ.
ಸಮೀಕ್ಷೆ ನಡೆಸಿದ ವರದಿಯ ಪ್ರಕಾರ, ಉನ್ನತ ಕಾರ್ಯ ನಿರ್ವಹಿಸುತ್ತಿರುವ ಏಳು ಮುಖ್ಯಮಂತ್ರಿಗಳಲ್ಲಿ ಆರು ಮಂದಿ ಬಿಜೆಪಿ ಅಲ್ಲದ ಮತ್ತು ಕಾಂಗ್ರೆಸ್ ಅಲ್ಲದ ಪಕ್ಷಗಳ ಮುಖ್ಯಮಂತ್ರಿಗಳು ಎನ್ನುವುದು ವಿಶೇಷ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಶೇ 15 ರಷ್ಟು ಮತಗಳು) ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (ಶೇ 11 ರಷ್ಟು ಮತ) ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಶೇ.9 ರಷ್ಟು ಮತ) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.