ಉತ್ತರಪ್ರದೇಶದ ಆಲಿಘರ್ ನಲ್ಲಿ ಗುರುವಾರ ನಡೆದ ಆಘಾತಕಾರಿ ಘಟನೆಯಲ್ಲಿ ಆಸ್ಪತ್ರೆಯ ಬಿಲ್ ಪಾವತಿಸದ 44 ವರ್ಷದ ಕಾರ್ಮಿಕನನ್ನು ಥಳಿಸಲಾಗಿದ್ದು, ತೀವ್ರ ಹಲ್ಲೆಗೊಳಗಾದ ಕಾರ್ಮಿಕ ಸಾವನ್ನಪ್ಪಿದ್ದಾನೆ.
44 ವರ್ಷದ ಸುಲ್ತಾನ್ ಖಾನ್ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಮೂತ್ರ ವಿಸರ್ಜನೆ ತೊಂದರೆ ಕಾರಣಕ್ಕೆ ಆತ ಖಾಸಗಿ ಆಸ್ಪತ್ರೆಗೆ ಸೋದರಳಿಯನೊಂದಿಗೆ ಹೋಗಿದ್ದಾನೆ. ಮೊದಲಿಗೆ ಚಿಕಿತ್ಸೆಗೆ ಎಷ್ಟು ಆಗುತ್ತದೆ ಎಂದು ಕೇಳಿದ್ದು ವಿವಿಧ ಪರೀಕ್ಷೆಗಳಿಗೆ ಆರಂಭದಲ್ಲಿ 5000 ರೂ. ಪಾವತಿಸಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನಂತರ ಆಸ್ಪತ್ರೆಯಲ್ಲಿ ದಿನಕ್ಕೆ 4-5 ಸಾವಿರ ರೂಪಾಯಿ ಬೆಡ್ ಚಾರ್ಜ್ ಕೊಡಬೇಕೆಂದು ಹೇಳಿದ್ದಾರೆ. ಇಷ್ಟೊಂದು ಮೊತ್ತ ಪಾವತಿಸಲು ಸಾಧ್ಯವಾಗದ ಕಾರಣ ಅವರನ್ನು ಬಿಡುಗಡೆ ಮಾಡುವಂತೆ ಅಳಿಯ ಕೇಳಿಕೊಂಡಿದ್ದಾನೆ.
ಸ್ಪತ್ರೆಯಿಂದ ಹೊರಟು ಬರುವ ಸಂದರ್ಭದಲ್ಲಿ 4000 ರೂ. ಶುಲ್ಕ ಪಾವತಿಸುವಂತೆ ಸಿಬ್ಬಂದಿಯೊಬ್ಬ ಹೇಳಿದ್ದು ಈ ವೇಳೆ ಅಷ್ಟೊಂದು ಹಣವಿಲ್ಲ ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.
ಆದರೆ ಇಷ್ಟಕ್ಕೇ ಸುಮ್ಮನಾಗದ ಆಸ್ಪತ್ರೆ ಸಿಬ್ಬಂದಿ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾನೆ. ನಂತರ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಆಗಮಿಸಿ ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಅವರು ಮೃತಪಟ್ಟಿರುವುದಾಗಿ ಸುಲ್ತಾನ್ ಖಾನ್ ಸೋದರಳಿಯ ಚಮನ್ ಹೇಳಿದ್ದಾರೆ.
ಕ್ವಾರ್ಸಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಚೋಟೆಲಾಲ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.