ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ರಾಷ್ಟ್ರದ ಭೂಭಾಗವನ್ನು ಚೀನಾಗೆ ಬಿಟ್ಟುಕೊಡುವ ಮೂಲಕ ಚೀನಿಯರಿಗೆ ಶರಣಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಚೀನಾ-ಭಾರತದ ನಡುವೆ ಉಲ್ಬಣಿಸಿರುವ ಬಿಕ್ಕಟ್ಟು ಕುರಿತಂತೆ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಒಂದಿಂಚನ್ನೂ ಶತ್ರು ರಾಷ್ಟ್ರಗಳಿಗೆ ಬಿಟ್ಟುಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದರು.
ಪ್ರಧಾನಿಗಳ ಈ ಹೇಳಿಕೆಯನ್ನೇ ಟ್ಯಾಗ್ ಮಾಡಿ ಟ್ವಿಟ್ ಮಾಡಿರುವ ರಾಹುಲ್‍ಗಾಂಧಿ ಅವರು ಚೀನಿಯರ ಆಕ್ರಮಣದಿಂದ ಕಂಗೆಟ್ಟು ಮೋದಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಅವರು ಚೀನಾಗೆ ಶರಣಾಗಿದ್ದಾರೆ ಎನ್ನುವಂತಿದೆ ಎಂದು ಟಾಂಗ್ ನೀಡಿದ್ದಾರೆ.
ಆಕ್ರಮಣ ನಡೆದ ಪ್ರದೇಶ ನಮಗೆ ಸೇರಿದ್ದರೆ ನಮ್ಮ ಯೋಧರನ್ನು ಚೀನಿಯರು ಹತ್ಯೆ ಮಾಡಿದ್ದೇಕೆ? ಹತ್ಯೆ ನಡೆದ ಸ್ಥಳ ಯಾವುದು ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.
ಚೀನಿಯರು ನಡೆಸಿದ ಆಕ್ರಮಣ ನೋಡಿದರೆ ನಮ್ಮ ದೇಶ ಮೈಮರೆತಿದೆ ಎನ್ನುವುದಕ್ಕೆ ಉದಾಹರಣೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಕೆಲ ಸಚಿವರು ಮೋದಿ ಅವರ ಪರ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಸರ್ವಪಕ್ಷಗಳ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಇದೀಗ ಟ್ವಿಟ್ ಮಾಡಿದ್ದಾರೆ.