ಬೆಳಗಾವಿ: ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಹುಕ್ಕೇರಿ ತಾಲ್ಲೂಕಿನ ಶಿರೂರು ಬಳಿ ಮಾರ್ಕಂಡೇಯ ನದಿಗೆ 9,500 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 3.69 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 3.40 ಟಿಎಂಸಿ ಅಡಿಗಳಷ್ಟು ನೀರು ಭರ್ತಿಯಾಗಿದೆ.
ಘಟಪ್ರಭಾ ನದಿಗೂ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಿಡಕಲ್ ಬಳಿ ಜಲಾಶಯಕ್ಕೆ 43,402 ಕ್ಯುಸೆಕ್ ನೀರು ಹರಿದುಬರುತ್ತಿದೆ. 51 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 36 ಟಿಎಂಸಿ ಅಡಿಗಳಷ್ಟು ನೀರು ಭರ್ತಿಯಾಗಿದೆ.
ಖಾನಾಪುರ ತಾಲ್ಲೂಕಿನಲ್ಲಿಯೂ ಸಹ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿಯ ಒಳಹರಿವು ಹೆಚ್ಚಳಗೊಂಡಿದೆ. 48,821 ಕ್ಯುಸೆಕ್ ನೀರು ಹರಿದುಬರುತ್ತಿದೆ. 37 ಟಿಎಂಸಿ ಅಡಿಗಳ ಸಾಮರ್ಥ್ಯದ ಸವದತ್ತಿಯ ನವಿಲುತೀರ್ಥ ಜಲಾಶಯದಲ್ಲಿ 22.514 ಟಿಎಂಸಿ ಅಡಿಗಳಷ್ಟು ಭರ್ತಿಯಾಗಿವೆ.
Laxmi News 24×7