ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ.
ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ ಪ್ರವೇಶ ಮಾಡಿದ ಸಮಯದಲ್ಲಿ ಊರಿನ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಇರುವ ಕಾರಣ ದೇವಾಲಯದ ಆಸುಪಾಸಿನ ಒಂದಷ್ಟು ಕುಟುಂಬಗಳು ಮಾತ್ರ ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನ ಗೈದರು.
ಪಶ್ಚಿಮ ಘಟ್ಟದ ತಪ್ಪಲಲ್ಲಿ ಭಾರೀ ಮಳೆಯಾದರೆ ನದಿನೀರು ಉಡುಪಿಯತ್ತ ಹರಿಯುತ್ತದೆ. ಕುಬ್ಜಾ ತುಂಬಿ ಹರಿಯುತ್ತದೆ. ಈ ಪುಣ್ಯ ಕಾಲದಲ್ಲಿ ಕುಬ್ಜಾ ನದಿ ಸ್ನಾನ ಬಹಳಷ್ಟು ಪರಿಣಾಮಕಾರಿ ಎಂಬ ಪ್ರತೀತಿ ಇದೆ. ಕಮಲಶಿಲೆಯಲ್ಲಿ ದುರ್ಗೆ ಲಿಂಗ ರೂಪದಲ್ಲಿ ನೆಲೆನಿಂತಿದ್ದಾಳೆ ಎಂಬ ನಂಬಿಕೆ ಇದೆ.