ಚಂಡೀಗಡ: ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಶೀಘ್ರದಲ್ಲೇ 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್ ವಿತರಿಸಲಿದೆ.
ಈಗಾಗಲೇ ಒಟ್ಟು 50 ಸಾವಿರ ಸ್ಮಾರ್ಟ್‌ಫೋನ್‌ಗಳು ಪಂಜಾಬಿಗೆ ಆಗಮಿಸಿದ್ದು, ಯಾರ ಬಳಿ ಫೋನ್ ಇಲ್ಲವೋ ಆ ವಿದ್ಯಾರ್ಥಿನಿಯರಿಗೆ ಈ ಫೋನ್‌ಗಳನ್ನು ನೀಡಲಾಗುವುದು. ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಈ ಫೋನ್‌ಗಳು ಸಹಾಯವಾಗಲಿದೆ ಎಂದು ಸಿಎಂ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಜನತೆಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಭರವಸೆ ನೀಡಿತ್ತು. ಈಗ ಕೋವಿಡ್ ಸಂಕಷ್ಟದ ಸಮಯದಲ್ಲಿ ಈ ಭರವಸೆಯನ್ನು ಸರ್ಕಾರ ಈಡೇರಿಸುತ್ತಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಬ್ರಿಂದರ್ ಧಿಲ್ಲಾನ್ ಮತ್ತು ತಂಡದ ಜೊತೆ ಸಿಎಂ ವಿಡಿಯೋ ಸಂವಹನ ನಡೆಸಿದ್ದರು. ಸಂವಹದನಲ್ಲಿ ಧಿಲ್ಲಾನ್ ಅವರು ಯುವಜನತೆಗೆ ನೀಡಲಾಗಿದ್ದ ಉಚಿತ ಸ್ಮಾರ್ಟ್‌ಫೋನ್ ಭರವಸೆ ವಿಳಂಬವಾಗಿರುವುದನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಅಮರಿಂದರ್ ಸಿಂಗ್ 50 ಸಾವಿರ ಸ್ಮಾರ್ಟ್‌ಫೋನ್‌ಗಳು ರಾಜ್ಯವನ್ನು ತಲುಪಿರುವ ವಿಚಾರವನ್ನು ತಿಳಿಸಿದ್ದಾರೆ.
ಪಂಜಾಬ್ ಸರ್ಕಾರ ಲಾವಾ ಕಂಪನಿಯ ಫೋನ್‌ಗಳನ್ನು ವಿತರಿಸಲಿದೆ. ಜೂನ್ 29ರಂದು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕಂಪನಿಯಲ್ಲಿ ಚೀನಾದ ಪಾತ್ರ ಏನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು.
ಗಲ್ವಾನ್ ಘರ್ಷಣೆಯ ಬಳಿಕ ಮಾತನಾಡಿದ್ದ ಅಮರಿಂದರ್ ಸಿಂಗ್, ಹಲವು ಚೀನಾ ಕಂಪನಿಗಳು ಪಿಎಂ ಕೇರ್ ಫಂಡ್‌ಗೆ ಹಣವನ್ನು ನೀಡಿದೆ. ಈ ಹಣವನ್ನು ಅವುಗಳಿಗೆ ನೀಡಬೇಕು. ಚೀನಾದ ಹಣ ನಮಗೆ ಬೇಡ ಎಂದಿದ್ದರು.
ಈ ವಿಚಾರದ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಗಡಿಯಲ್ಲಿ ನಮ್ಮ ಸೈನಿಕರ ಮೇಲೆ ಪಿಎಲ್‌ಎ(ಪೀಪಲ್ಸ್ ಲಿಬರೇಷನ್ ಆರ್ಮಿ) ದಾಳಿ ಮಾಡುತ್ತಿರುವ ಸಂದರ್ಭದಲ್ಲಿ ಚೀನಾ ಕಂಪನಿಗಳಿಗೆ ಲಾಭ ಮಾಡುವ ಯಾವುದೇ ಆಲೋಚನೆ ನಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಹೇಳಿದ್ದರು.
2017ರ ಪ್ರಣಾಳಿಕೆಯಲ್ಲಿ ಪಟ್ಟಿ ಮಾಡಲಾದ 562ರ ಪೈಕಿ 435 ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಉಳಿದವುಗಳನ್ನು ಈ ವರ್ಷ ಜಾರಿಗೆ ತರಲು ಮುಂದಾಗುತ್ತೇವೆ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದರು.