ಬೆಂಗಳೂರು, ಏಪ್ರಿಲ್ 12: ಕೊರೋನಾ ಎರಡನೇ ಅಲೆ ಹಾಗೂ ಸಾರಿಗೆ ನೌಕರರ ಮುಷ್ಕರದ ಗದ್ದಲದೊಳಗೆ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೋಮವಾರ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಸಿಡಿ ಸಂತ್ರಸ್ತ ಯುವತಿ “ಸಿಡಿ ಪ್ರಕರಣದ ವಾಸ್ತವವನ್ನು ಎಸ್‌ಐಟಿ ಅಧಿಕಾರಿಗಳ ಮುಂದೆ ಬಿಚ್ಚಿಡಲು ಕೇಳಿಕೊಂಡಿದ್ದಾಳೆ ಎಂಬ ವಿಷಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ಸಿಡಿ ಲೇಡಿ ನಿಜವಾಗಿಯೂ ಉಲ್ಟಾ ಹೊಡೆದಿದ್ದಾಳಾ ? ಅಥವಾ ಮುಂದೆ ಯು ಟರ್ನ್ ಹೊಡೆಯಲಿದ್ದಾಳಾ ? ಒಂದು ವೇಳೆ ಸಂತ್ರಸ್ತ ಯುವತಿ ಯು ಟರ್ನ್ ಹೊಡೆದರೆ ಬಹುದೊಡ್ಡ ಬದಲಾವಣೆ ಆಗಲಿದೆ. ಸಿಡಿ ಸಂತ್ರಸ್ತ ಯುವತಿ ಎಸ್‌ಐಟಿ ಅಧಿಕಾರಿಗಳ ಮುಂದೆ ಮಹತ್ವದ ಸಂಗತಿ ಹೇಳಿಕೊಳ್ಳಲು ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ ಎನ್ನಲಾಗಿದೆ.
ಸಿಡಿ ಲೇಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ಮುಗಿದಿದೆ. ಇದರ ಬೆನ್ನಲ್ಲೇ ಸಿಡಿ ಸಂತ್ರಸ್ತ ಯುವತಿ ಪೋಷಕರು ದಾಖಲಿಸಿದ್ದ ಅಪಹರಣ ಪ್ರಕರಣದ ವಿಚಾರಣೆ ಕೂಡ ಮುಗಿದಿತ್ತು. ಎರಡು ದಿನ ವಿಶ್ರಾಂತಿ ಪಡೆದಿದ್ದ ಸಿಡಿ ಸಂತ್ರಸ್ತ ಯುವತಿಯನ್ನು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬ್ಲಾಕ್ ಮೇಲ್ ಪ್ರಕರಣದಲ್ಲಿ ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿತ್ತು. ಇದರ ಬೆನ್ನಲ್ಲೇ ಸಿಡಿ ಸಂತ್ರಸ್ತ ಯುವತಿಯ ಕೆಲವು ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪತ್ರ ಬರೆದಿರುವ ಸಿಡಿ ಸಂತ್ರಸ್ತ ಯುವತಿ ಕೆಲವು ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನನಗೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದೆ. ಆದರೆ ನನಗೆ ಗೊತ್ತಿಲ್ಲದೇ ವಿಚಾರಗಳು ನಡೆಯಿತು. ನನ್ನ ಬೆನ್ನಹಿಂದೇ ನಡೆದ ವಿಚಾರ ತಿಳಿದುಕೊಳ್ಳೋದಕ್ಕೆ ಸಾಕಷ್ಟು ದಿನಗಳು ಆಯಿತು. ನನ್ನ ಅಪ್ಪ ಅಮ್ಮನಿಗೂ ಕೂಡ ನಾನು ನೋವು ಕೊಟ್ಟಿದ್ದೇನೆ. ನಾನು ಒಳ್ಳೆಯ ಮಗಳಾಗಬೇಕು ಅಂತ ನನ್ನ ಅಪ್ಪ ನಿರೀಕ್ಷೆ ಮಾಡಿದ್ದರು. ನನ್ನ ಸ್ನೇಹಿತ ಆಕಾಶ್‌ಗೆ ಕೂಡ ಕೆಲವು ವಿಚಾರ ಮರೆ ಮಾಚಿದ್ದಾರೆ. ನನಗಿಂತಲೂ ಅವನಿಗೆ ಯಾವ ವಿಚಾರವೂ ಗೊತ್ತಿಲ್ಲ. ನಿಜವಾಗಿಯೂ ಅನ್ಯಾಯಕ್ಕೆ ಒಳಗಾದವಳು ನಾನು. ನಾನು ಸತ್ಯವನ್ನು ಹೇಳಬೇಕು ಎಂದು ಬಯಸಿದ್ದೇನೆ. ನನ್ನ ಹೇಳಿಕೆಗೆ ಬದ್ಧವಾಗಿರುತ್ತೇನೆ. ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನಿಜವಾಗಿಯೂ ನಾನು ಮೋಸ ಹೋಗಿರುವ ಬಗ್ಗೆ ನ್ಯಾಯಾಲಯದಲ್ಲಿಯೇ ಹೇಳಿಕೆ ದಾಖಲಿಸುತ್ತೇನೆ ಎಂದು ಸಿಡಿ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ಆದರೆ,ಇದನ್ನು ಸಿಡಿ ಪರ ವಕೀಲ ಸೂರ್ಯ ಮುಕುಂದ ರಾಜ್ ಅಲ್ಲಗಳೆದಿದ್ದಾರೆ. ಪ್ರಕರಣ ತನಿಖೆ ಸಂಬಂಧ ವಾಟ್ಸಪ್ ಚಾಟ್ ಮಾಹಿತಿ ಹಂಚಿಕೊಳ್ಳಲು ತನಿಖಾಧಿಕಾರಿಗಳು ಮನವಿ ಮಾಡಿದ್ದರು. ಅದನ್ನು ನೀಡಲಿಕ್ಕೆ ಕಾಲಾವಕಾಶ ಬೇಕು ಎಂದು ಸಿಡಿ ಸಂತ್ರಸ್ತ ಯುವತಿ ಮನವಿ ಮಾಡಿಕೊಂಡಿದ್ದಾಳೆ. ಆಕೆ ಯಾವುದೇ ರೀತಿಯಲ್ಲೂ ಹೇಳಿಕೆ ಬಗ್ಗೆ ಉಲ್ಲೇಖಿಸಿಲ್ಲ. ಮಾಧ್ಯಮಗಳು ಕಪೋಕಲ್ಪಿತ ವರದಿಗಳು ಪ್ರಸಾರ ಮಾಡುತ್ತಿವೆ. ಈ ಬಗ್ಗೆ ಸಿಡಿ ಸಂತ್ರಸ್ತ ಯುವತಿ ಕೂಡ ಗಾಬರಿಯಾಗಿದ್ದಾಳೆ. ಸಂತ್ರಸ್ತ ಯುವತಿ ವಿರುದ್ಧ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ವಿರುದ್ಧ ನ್ಯಾಯಾಲಯ ಮೊರೆ ಹೋಗಿದ್ದೇವೆ. ಪ್ರಕರಣದ ತನಿಖೆ ಸಂಬಂಧ ಎಸ್‌ಐಟಿ ಅಧಿಕಾರಿಗಳು ಕೇಳಿರುವ ಮಾಹಿತಿ ನೀಡಲಾಗುವುದು. ಸಂತ್ರಸ್ತ ಯುವತಿ ತನ್ನ ಈ ಹಿಂದಿನ ಹೇಳಿಕೆಗೆ ಬದ್ಧವಾಗಿದ್ದಾಳೆ ಎಂದು ತಿಳಿಸಿದ್ದಾರೆ. ಸಿಡಿ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಕೂಡ ಇದೇ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಇನ್ನು ಸಿಡಿ ಸಂತ್ರಸ್ತ ಯುವತಿಯ ಈ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ. ಬೆಳಗಾವಿಯಲ್ಲಿ ಸಿಡಿ ಪ್ರಕರಣ ಕುರಿತು ರಾಜಕೀಯ ಮುಖಂಡರು ಕಾಲು ಎಳೆದುಕೊಳ್ಳುತ್ತಿದ್ದಾರೆ. ಮುಗ್ಧ ಹೆಣ್ಣು ಮಗಳನ್ನು ಬಳಸಿಕೊಂಡು ಮಹಾನಾಯಕ ಷಡ್ಯಂತ್ರ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಹಾನಾಯಕನಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇದರ ನಡುವೆ ಕೆ.ಎಸ್. ಈಶ್ವರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಂತೂ ಸಿಡಿ ಸಂತ್ರಸ್ತ ಯುವತಿ “ಅಶ್ಲೀಲ ಸಿಡಿ ಪ್ರಕರಣದ ವಾಸ್ತವ” ಬಿಚ್ಚಿಟ್ಟರೆ ನಿಜವಾಗಿಯೂ ಇದು ಯಾವ ನಾಯಕನ ಕೊರಳಿಗೆ ಸುತ್ತಿಕೊಳ್ಳಲಿದೆಯೋ ದೇವರೇ ಬಲ್ಲ.
Laxmi News 24×7