ಬೆಂಗಳೂರು : ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು 8 ನೇ ಬಾರಿಗೆ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದ ಮಹಿಳಾ ಉದ್ಯಮಿಗಳು ಹಾಗೂ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಸ್ಪಷ್ಟ ದೂರದರ್ಶಿತ್ವ ಮತ್ತು ಮಾರ್ಗದರ್ಶಿಗಳನ್ನು ನೀಡಿದ್ದಾರೆ. ವಿಶ್ವ ಹೂಡಿಕೆದಾರರ ಸಮ್ಮೇಳನ ಆಯೋಜನೆ ಮತ್ತು ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಕೆಯ ಭರವಸೆ ನೀಡುವ ಮೂಲಕ ರಾಜ್ಯ ಕೈಗಾರಿಕಾಭಿವೃದ್ದಿಗೆ ಸಜ್ಜಾಗಿದೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ನಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಸ್ಪಷ್ಟ ಮಾರ್ಗದರ್ಶನವನ್ನು ನೀಡಿದ್ದಾರೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇಕಡಾ. 4 ರಿಯಾಯಿತಿ ಬಡ್ಡಿದರದಲ್ಲಿ 2 ಕೋಟಿವರೆಗಿನ ಸಾಲ ಸೌಲಭ್ಯ. ಸಂಜೀವಿನ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ ನೀಡುವ ಘೋಷಣೆ ಮೂಲಕ 60 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯುವ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು, 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ ಹಾಗೂ ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಮಾವಳಿಗಳ ಮರುಪರಿಶೀಲನೆ ಮಾಡುವ ಭರವಸೆಯಿಂದಾಗಿ ಮಹಿಳಾ ಉದ್ಯಮಗಳು ಹೆಚ್ಚಾಗಲಿವೆ ಎಂದು ಹೇಳಿದರು.
ಯಾದವಗಿರಿ ಜಿಲ್ಲೆಯ ಕಡೇಚೂರಿನಲ್ಲಿ 1,478 ಕೋಟಿ ವೆಚ್ಚದಲ್ಲಿ ಬಲ್ಕ್ ಡ್ರಗ್ ಪಾರ್ಕ್ ಹಾಗೂ ಮಂಗಳೂರಿನಲ್ಲಿ 66 ಕೋಟಿ ವೆಚ್ಚದಲ್ಲಿ 66 ಕೋಟಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮತ್ತು ಬೀದರ್ ನ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್ ನಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರಾಜ್ಯ ಸರಕಾರ ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತು ನೀಡಿದೆ.
ಕೈಗಾರಿಕೋದ್ಯಮಿಗಳ ಬಹುದಿನಗಳ ಬೇಡಿಕೆಯಾಗಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬ್ ನಿಗದಿಗೆ ಕ್ರಮ ಘೋಷಣೆಯಿಂದಾಗಿ ಕೈಗಾರಿಕಾ ಸ್ಥಾಪನೆಗೆ ಪ್ರೋತ್ಸಹ ದೊರಕಲಿದೆ.
ಅಲ್ಲದೆ, ಬೆಂಗಳೂರು ಚೆನ್ನೈ ಮತ್ತು ಬೆಂಗಳೂರು – ಮುಂಬಯಿ ಕಾರಿಡಾರ್ ನ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ತಲಾ ಕನಿಷ್ಠ 500 ಏಕರೆ ಜಾಗದಲ್ಲಿ ಮುಖ್ಯ ಮಂತ್ರಿಗಳ ಸಂಯೋಜಿತ ಕೈಗಾರಿಕಾ ಟೌನ್ ಶಿಪ್‌ಗಳ ಸ್ಥಾಪನೆಯ ಘೋಷಣೆಯಿಂದಾಗಿ, ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕೋಟಿ ಬಂಡವಾಳ ಆಕರ್ಷಣೆ ಹಾಗೂ 5 ಲಕ್ಷ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆಯ ರಾಜ್ಯದ ಅಭಿವೃದ್ದಿಗೆ ಪ್ರಮುಖ ಕೊಡಗೆಯನ್ನು ನೀಡಲಿದೆ ಎಂದರು.
ಪೀಣ್ಯ ಕೈಗಾರಿಕಾ ಟೌನ್ ಶಿಪ್ ಸ್ಥಾಪನೆ ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ 100 ಕೋಟಿ ರೂಪಾಯಿ ನೀಡಿರುವುದರಿಂದ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ದಿಯಾಗಲಿದ್ದು, ಇನ್ನು ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗಲಿದೆ.
ಇದೇ ವೇಳೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ.4 ರಷ್ಟು ಬಡ್ಡಿ ಸಹಾಯಧನ ಯೋಜನೆ ಮಳಿಗೆ/ಡೀಲರ್‌ಶಿಫ್/ಫ್ರಾಂಚೈಸಿ ಮತ್ತು ಹೊಟೇಲ್ ಉದ್ಯಮಗಳನ್ನು ಪ್ರಾರಂಭಿಸಲು ವಿಸ್ತರಣೆ ಮಾಡಿದ್ದಾರೆ. TATA Technologies Limited ಸಹಯೋಗದೋಂದಿಗೆ 4,636 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 150 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ ಕ್ರಮ ಘೋಷಣೆಯಾಗಿದೆ. ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೊಸದಾಗಿ 23 ಅಲ್ಪಾವಧಿ ಹಾಗೂ 11 ಧೀರ್ಘಾವತಿ ವೃತ್ತಿಪರ ಕೋರ್ಸ್ ಪ್ರಾರಂಭ ದಿಂದ ಕೈಗಾರಿಕೆಗಳಿಗೆ ಬೇಕಾದಂತಹ ಕೌಶಲ್ಯ ಹೊಂದಿರುವ ಮಾನವ ಸಂಫನ್ಮೂಲ ಲಭ್ಯತೆಯು ಹೆಚ್ಚಾಗಲಿದೆ.
ಒಟ್ಟಾರೆಯಾಗಿ ರಾಜ್ಯವನ್ನು ಮತ್ತಷ್ಟು ಕೈಗಾರಿಕಾ, ಬಂಡವಾಳ ಸ್ನೇಹೀ ಮತ್ತು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವಂತಹ ಅಂಶಗಳನ್ನು ಹೊಂದಿರುವ ಬಜೆಟ್ ಎಂದು ಹೇಳಿದ್ದಾರೆ.