Breaking News

ಜೀವನವೆಂಬ ಪರೀಕ್ಷೆಗೆ ಪಠ್ಯವಿಲ್ಲ: ಸುಧಾಮೂರ್ತಿ

Spread the love

ಬೆಂಗಳೂರು: ‘ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮಾತ್ರಕ್ಕೆ ಎಲ್ಲವೂ ದೊರೆಯುವುದಿಲ್ಲ. ಪ್ರತಿಯೊಬ್ಬರೂ ಜೀವನವೆಂಬ ಪರೀಕ್ಷೆ ಎದುರಿಸಬೇಕಾಗುತ್ತದೆ. ಆದರೆ, ಇಲ್ಲಿ ನಿರ್ದಿಷ್ಟ ಪಠ್ಯ ಇರದ ಕಾರಣ ನಮಗೆ ಎದುರಾಗುವ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾ ಸಾಗಬೇಕಿದೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು.

ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು 75ನೇ ಬ್ಯಾಚ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಡೆತಡೆಗಳು, ಸವಾಲುಗಳು ಎಲ್ಲರ ಜೀವನದಲ್ಲಿಯೂ ಇರುತ್ತವೆ. ಅದನ್ನು ನಾವು ಯಾವ ರೀತಿ ಎದುರಿಸುತ್ತೇವೆ ಎನ್ನುವುದು ಮುಖ್ಯ. ಕಲಿಕೆ, ಜ್ಞಾನ ಮತ್ತು ಅನುಭವವು ಯಶಸ್ಸಿನ ಹಾದಿಯೆಡೆಗೆ ಕರೆದೊಯ್ಯುತ್ತವೆ. ಕಠಿಣ ಪರಿಶ್ರಮ, ಮೌಲ್ಯಯುತ ಜೀವನವು ಕಡೆಯವರೆಗೂ ನಮ್ಮ ಕೈ ಹಿಡಿಯುತ್ತದೆ. ಜೀವನವೆಂಬ ಗುಂಪಿನ ಆಟವನ್ನು ಏಕಾಂಗಿಯಾಗಿ ಜಯಿಸಲು ಸಾಧ್ಯವಿಲ್ಲ. ಗುರಿ ತಲುಪಲು ಎಲ್ಲರ ಸಹಕಾರ ಹಾಗೂ ಕೊಡುಗೆ ಅತೀ ಮುಖ್ಯ. ವೈಫಲ್ಯ ಕೂಡ ಜೀವನದ ಭಾಗವಾಗಿದ್ದು, ಅದು ನಮಗೆ ಪಾಠ ಕಲಿಸುತ್ತದೆ’ ಎಂದು ಹೇಳಿದರು.

‘ಶಿಕ್ಷಣ ಮುಗಿಸಿ ಹೊರ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಹೊಸ ಪರೀಕ್ಷೆ, ಸವಾಲುಗಳು ಎದುರಾಗುತ್ತವೆ. ಅವನ್ನು ಧೈರ್ಯವಾಗಿ ಎದುರಿಸಬೇಕು. ಸ್ಪರ್ಧಾತ್ಮಕ ಬದುಕಿನಲ್ಲಿ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಅದೇ ರೀತಿ, ಸಾಕಷ್ಟು ಹಣ ಬಂದಾಗ ಮೈಮರೆಯಬಾರದು. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಮ್ರದಿಂದ ವರ್ತಿಸಬೇಕು’ ಎಂದು ಕಿವಿಮಾತು ಹೇಳಿದರು.

ಬಿಎಂಎಸ್ ಶಿಕ್ಷಣ ಟ್ರಸ್ಟಿನ ಟ್ರಸ್ಟಿ ಮತ್ತು ಸದಸ್ಯ ಕಾರ್ಯದರ್ಶಿ ಡಾ.ಬಿ.ಎಸ್. ರಾಗಿಣಿ ನಾರಾಯಣ್, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಾ.ಪಿ. ದಯಾನಂದ ಪೈ, ಬಿಎಂಎಸ್ ಕಾನೂನು ಕಾಲೇಜಿನ ಅಧ್ಯಕ್ಷ ಎಂ. ಮದನಗೋಪಾಲ್, ಬಿಎಂಎಸ್‌ಇಟಿ ನಿರ್ದೇಶಕ ಮುರಳಿ ಕೃಷ್ಣ, ಪ್ರಾಂಶುಪಾಲ ಡಾ.ಬಿ.ವಿ. ರವಿಶಂಕರ್, ಉಪಪ್ರಾಂಶುಪಾಲ ಡಾ.ಎಸ್. ಮುರಳೀಧರ, ಶೈಕ್ಷಣಿಕ ವಿಭಾಗದ ಡೀನ್ ಡಾ. ಸಮಿತಾ ಮೈತ್ರಾ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ