Breaking News

ಜನಪ್ರತಿನಿಧಿಗಳ ಜತೆ ಸಂವಹನ ಇರಲಿ: ಗದಗ ಜಿ.ಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೂಚನೆ

Spread the love

ಗದಗ: ‘ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ಕಾರ ನೀಡುವ ಆದೇಶಗಳು, ನೂತನ ಯೋಜನೆಗಳ ಮಾಹಿತಿ ಹಾಗೂ ಅನುದಾನದ ವಿವರಗಳನ್ನು ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಈ ಮೂಲಕ ಉತ್ತಮ ಆಡಳಿತಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ಡಿಎಚ್‌ಒ ಡಾ.ಸತೀಶ ಬಸರಿಗಿಡದ ಮಾತನಾಡಿ, ‘ಆಂಬುಲೆನ್ಸ್‌ ಖರೀದಿ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಆ ವೇಳೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು, ‘ಪ್ರಸ್ತಾವ ಸಲ್ಲಿಸಿದ ವಿಚಾರವನ್ನು ನಮ್ಮ ಗಮನಕ್ಕೆ ತಂದಿಲ್ಲವೇಕೆ’ ಎಂದು ಹರಿಹಾಯ್ದರು. ‘ಮುಂದೆ ಯಾವುದೇ ವಿಚಾರ ಇದ್ದರೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶೋಭಾ ಮೇಟಿ ಹಾಗೂ ಸಿದ್ದು ಪಾಟೀಲ ಮಾತನಾಡಿ, ‘ಕೋವಿಡ್‌-19 ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿದ್ದ ಆಂಬುಲೆನ್ಸ್‌ಗಳನ್ನು ಜಿಲ್ಲಾ ಕೇಂದ್ರಕ್ಕೆ ನೀಡಲಾಗಿತ್ತು. ಈಗ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಕ್ಕೆ ಬಂದಿದ್ದು, ಆಂಬುಲೆನ್ಸ್‌ಗಳನ್ನು ವಾಪಸ್‌ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಆನಂದ್ ಕೆ. ಮಾತನಾಡಿ, ‘ಆಸ್ಪತ್ರೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ನೀಡಿದ ಅನುದಾನ ಸದ್ಭಳಕೆಯಾಗಿದೆಯೇ ಎಂದು ಪರಿಶೀಲಿಸಬೇಕು. ಎಲ್ಲ ಇಲಾಖಾಧಿಕಾರಿಗಳು ಶಿಷ್ಟಾಚಾರದ ಅನ್ವಯ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು’ ಎಂದು ಸೂಚಿಸಿದರು.

ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ಮಾತನಾಡಿ, ‘ವಿದ್ಯಾಗಮ ಯೋಜನೆ ಪ್ರಗತಿಯಲ್ಲಿದ್ದು, 9 ಮತ್ತು 10ನೇ ತರಗತಿಗಳು ಆರಂಭಗೊಂಡಿವೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಪರೀಕ್ಷೆಗಳ ಪೂರ್ವಸಿದ್ಧತೆ ಆರಂಭಗೊಂಡಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ₹5 ಲಕ್ಷಕ್ಕೂ ಮೇಲಿನ ಕಾಮಗಾರಿಗಳನ್ನು ಕಡ್ಡಾಯವಾಗಿ ಪಿಆರ್‌ಡಿ ಇಲಾಖೆಗೆ ವಹಿಸಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳು ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು. ಕಟ್ಟಡ ಕಟ್ಟುವಾಗ ಕ್ಯೂರಿಂಗ್ ಚೆನ್ನಾಗಿ ಮಾಡಿಸಬೇಕು’ ಎಂದು ನಾಡಗೌಡ್ರ ಸೂಚಿಸಿದರು.

ಸಮಯಾವಕಾಶದ ಕೊರತೆ ಎದುರಾಗಿದ್ದರಿಂದ ಉಳಿದಿರುವ ಇಲಾಖೆಗಳ ಪ್ರಗತಿ ಕುರಿತು ಚರ್ಚಿಸಲು ದಿನಾಂಕ ನಿಗದಿ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಲ್ಲಾ ಪಂಚಾಯ್ತಿಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹ

‘ಬಿಂಕದಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ₹1.45 ಕೋಟಿ ವೆಚ್ಚದಲ್ಲಿ ಸೋಲಾರ್‌ ಅಳವಡಿಸಲಾಗಿದ್ದು ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು‌ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಕುಂತಲಾ ಮೂಲಿಮನಿ ಸಭೆಯ ಗಮನಕ್ಕೆ ತಂದರು.

‘ಸೋಲಾರ್‌ ಅಳವಡಿಸುವ ಏಜೆನ್ಸಿಯವರು ಮುಂದಿನ 5 ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಬೇಕು ಎಂದು ಟೆಂಡರ್‌ನಲ್ಲಿ ಸೂಚಿಸಲಾಗಿದೆ. ಆದರೂ, ಅವರು ನಿರ್ವಹಣೆ ಮಾಡುತ್ತಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆ ಮುಂಗಡ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಪ್ರತಿ ರೈತರಿಂದ 15 ಕ್ವಿಂಟಲ್ ಕಡಲೆ ಖರೀದಿ

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ‘ರೈತರಿಗೆ ಪರಿಹಾರ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ’ ಎಂದು ಹೇಳಿದರು.

ಹಿಂಗಾರು ಕಡಲೆ ಖರೀದಿಗಾಗಿ ಖರೀದಿ ಕೇಂದ್ರದ ನೋಂದಣಿ ಕೆಲಸ ಫೆ.15ರಿಂದ ಆರಂಭವಾಗಲಿದ್ದು ಕಡಲೆ ಬೆಳೆದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರತಿ ಕ್ವಿಂಟಲ್ ಕಡಲೆಗೆ ₹5,110 ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲಿದೆ. ಪ್ರತಿ ರೈತರಿಂದ 15 ಕ್ವಿಂಟಲ್ ಕಡಲೆ ಖರೀದಿಸಲಾಗುವುದು. ಇದರ
ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ