ಇ-ಸ್ವತ್ತು: ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಕ್ರಮ- ಪ್ರಿಯಾಂಕ್ ಖರ್ಗೆ
ಬೆಂಗಳೂರು: ಇ-ಸ್ವತ್ತು ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ NIC ತಾಂತ್ರಿಕ ದೋಷ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು, ಆತಂಕ ಬೇಡ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 ಅನ್ನು ಅಧಿಸೂಚಿಸಲಾಗಿದ್ದು, ಈ ನಿಯಮಗಳನ್ವಯ ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ಮಾರ್ಪಡಿಸಿ ಚಾಲನೆಗೊಳಿಸಲಾಗಿದೆ. ತಂತ್ರಾಂಶದಲ್ಲಿ ಈವರೆಗೂ ಒಟ್ಟು 8,886 ಅರ್ಜಿಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ. ತಂತ್ರಾಂಶ ಸಿದ್ಧಪಡಿಸಿರುವ ಎನ್.ಐ.ಸಿ. ತಂತ್ರಾಂಶದ ದೋಷದಿಂದಾಗಿ ಕೆಲಮೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ” ಎಂದು ಖರ್ಗೆ ತಿಳಿಸಿದ್ದಾರೆ.
“ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶವನ್ನು ನಿಯಮಗಳನ್ವಯ ಮಾರ್ಪಡು ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಲಾಗಿನ್ ಸೃಜಿಸಲಾಗಿರುತ್ತದೆ. ಇ-ಸ್ವತ್ತು 2.0 ತಂತ್ರಾಂಶವನ್ನು ‘ಭೂಮಿ’, ‘ಕಾವೇರಿ’, ‘ಪಂಚತಂತ್ರ’, ‘ಮೋಜಿಣಿ’ ಹಾಗೂ ಎಸ್ಕಾಂಗಳ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿದೆ. ಈ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು/API ಸಮಸ್ಯೆಗಳು ಉಂಟಾಗಿವೆ” ಎಂದು ಸಚಿವರು ಹೇಳಿದ್ದಾರೆ.
“ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿ (9483476000) ಪ್ರಾರಂಭಿಸಲಾಗಿದ್ದು, ಪ್ರತಿದಿನ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.inರಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಸಹಾಯ ವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಮತ್ತೊಮ್ಮೆ ಪುನಶ್ಚೇತನ ತರಬೇತಿಯನ್ನು ಆಯೊಜೀಸಲಾಗಿದೆ” ಎಂದು ಮಾಹಿತಿ ನೀಡಿದರು.
Laxmi News 24×7