ರಾಯಚೂರು: ಬ್ಯಾಂಕ್ ಖಾತೆಯಲ್ಲಿದ್ದ 6,69,904 ರೂ. ಹಣವು ಖಾತೆದಾರರ ಗಮನಕ್ಕೂ ಬಾರದೆ, ವರ್ಗಾವಣೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ರೈತ ಮಹಿಳೆ ನೀಡಿದ ದೂರಿನ ಮೇರೆಗೆ ರಾಯಚೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಾಚನೂರು ಗ್ರಾಮದ ರೈತ ಮಹಿಳೆ ಜ್ಯೋತಿ ಎಂಬುವರೇ ಹಣ ಕಳೆದುಕೊಂಡವರು. ಇವರು ಮಾನ್ವಿ ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಹಣ ವರ್ಗಾವಣೆ ಆಗಿರುವುದಾಗಿ ದೂರು ನೀಡಿದ್ದಾರೆ. ವರ್ಷಪೂರ್ತಿ ದುಡಿಮೆ ಮಾಡಿದ ಹಣ ಕಳೆದುಕೊಂಡು ಮಹಿಳೆಯ ಹಾಗೂ ಅವರ ಪತಿ ಶರಣಬಸವ ಅವರು ದಿಕ್ಕು ತೋಚದಂತಾಗಿದ್ದಾರೆ.![]()
ದೂರಿನ ವಿವರ: ಜ್ಯೋತಿ ದಂಪತಿ 10 ಎಕರೆ ಹೊಲವನ್ನು ಲೀಸ್ಗೆ ಪಡೆದು, ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಭೂ ತಾಯಿಯನ್ನು ನಂಬಿಕೊಂಡು ಸಾಲ-ಸೋಲ ಮಾಡಿಕೊಂಡು ಕೃಷಿ ಮಾಡಿದ ದಂಪತಿಗೆ ಹತ್ತಿ ಬೆಳೆ ಚೆನ್ನಾಗಿ ಬಂದಿತ್ತು. ಬಳಿಕ ಫಸಲನ್ನು ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಕಾಟನ್ ಕಾರ್ಪೋಷನ್ಗೆ ಮಾರಾಟ ಮಾಡಿದ್ದ ಹತ್ತಿಯ ಹಣವು ಮೊದಲಿಗೆ ಜಮೀನು ಮಾಲೀಕನ ಖಾತೆಗೆ ಜಮಾ ಆಗಿತ್ತು. ಬಳಿಕ, ಬಳಿಕ ಹಣವನ್ನು ಲೀಸ್ ಪಡೆದ ಮಹಿಳೆ ಜ್ಯೋತಿ ಅವರು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಅದರಂತೆ 2025ರ ನ.21ರಂದು ಬ್ಯಾಂಕ್ ಖಾತೆಗೆ 6,69,500 ರೂ. ಹಣ ಜಮಾ ಆಗಿತ್ತು. ನಂತರ ಮತ್ತೆ, ನ.26ರಂದು 2,31,000 ರೂ. ಜಮೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ನ.28ರಂದು ಬ್ಯಾಂಕ್ಗೆ ಹೋಗಿ ಪರಿಶೀಲಿಸಿದಾಗ 2,31,000 ರೂ. ಮಾತ್ರ ಖಾತೆಯಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ವ್ಯವಸ್ಥಾಪಕರಿಗೆ ಸದರಿ ಹಣವನ್ನು ಹೋಲ್ಡ್ ಮಾಡಲು ತಿಳಿಸಿ, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು ಚೆಕ್ ಮಾಡಿದಾಗ 23-11-2025ರಂದು ಹಂತ-ಹಂತವಾಗಿ ಒಟ್ಟು 6,69,904 ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಹಣ ವರ್ಗಾವಣೆ ಆಗಿರುವ ಕುರಿತು ತಮ್ಮ ಮೊಬೈಲ್‌ಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದು ಮಹಿಳೆಯು ವರ್ಗಾವಣೆ ಆಗಿರುವ ಮಾಹಿತಿಯಿರುವ ಬ್ಯಾಂಕ್ ಸ್ಟೇಟ್‌ಮೆಂಟ್ ಜೊತೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
Laxmi News 24×7