ಮೈಸೂರು: ‘ನಾನು ಹೈಕಮಾಂಡ್ ಎಂದು ಹೇಳುವ ಧೈರ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಸೀನಿಯರ್, ರಾಜ್ಯದ ಸಿಎಂ ಕುರ್ಚಿ ವಿಚಾರವಾಗಿ ಸರಿಯಾಗಿ ನಿರ್ಧಾರ ಕೈಗೊಳ್ಳಲು ಅವರಿಗೆ ಆಗುತ್ತಿಲ್ಲ. ದಲಿತ ಸಿಎಂ ವಿಚಾರ ಬಂದಾಗ ಡಿ.ಕೆ. ಶಿವಕುಮಾರ್ ಅವರು, ಖರ್ಗೆ ಅವರು ಸಿಎಂ ಆದರೆ ನಾನು ಬಿಟ್ಟು ಕೊಡುವೆ ಅಂದಿದ್ದರು. ಆದರೆ, ಸಿದ್ದರಾಮಯ್ಯನವರಿಗೆ ಆ ಉದಾರತೆ ಇಲ್ಲ. ಪಕ್ಷ ಕಟ್ಟಿ ದುಡಿದಿರುವ ಡಿ.ಕೆ. ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡಬೇಕು. ಆದರೆ, ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ಹೈಕಮಾಂಡ್ ಮಾತನಾಡುತ್ತಿಲ್ಲ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂದಾಯಿತು ಎಂದರು.
ಅಹಿಂದ ಸಮ್ಮೇಳನದಿಂದ ಕಾಂಗ್ರೆಸ್ ಬಾಗಿಲು ಹಾಕಿಸುತ್ತಿರಾ? ‘ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್‌ನಲ್ಲಿ ಇದ್ದೀರೋ ಅಥವಾ ಬೇರೆ ಪಕ್ಷದಲ್ಲಿ ಇದ್ದೀರೋ?, ಕಾಂಗ್ರೆಸ್ಸೇ ಅಹಿಂದ. ಹೀಗಿರುವಾಗ ಅಹಿಂದ ಸಮ್ಮೇಳನ ಮಾಡಿಸಿ ಕಾಂಗ್ರೆಸ್ ಬಾಗಿಲು ಹಾಕಿಸುತ್ತಿರಾ?. ಕಾಂಗ್ರೆಸ್‌ನಲ್ಲಿ ಕೇಳುವವರು ಇಲ್ಲದೇ ಹೀಗೆ ಆಗುತ್ತಿದೆ’ ಎಂದರು.
ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು. ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಮೂವರು ಸಾವನ್ನಪ್ಪಿದ್ದಾರೆ. ಆ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾದಲ್ಲಿ ಏನೂ ರೆಕಾರ್ಡ್ ಆಗಿಲ್ಲ. ಅರಮನೆಗೆ ಭದ್ರತೆ ಇಲ್ಲದಂತಾಗಿದೆ. ಪಾರಂಪರಿಕ ಕಟ್ಟಡವಾಗಿರುವ ಅರಮನೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಅರಮನೆ ಒಳಗೆ ಬರುವವರು ಹಾಗೂ ಹೋಗುವವರನ್ನು ಕೇಳುವವರು ಇಲ್ಲ. ಅರಮನೆ ಒಳಗೆ ಹೋಗಲು ಟಿಕೆಟ್ ಮಾಡುತ್ತಾರೆ. ಅರಮನೆಯಲ್ಲಿ ಎಂಟ್ರಿ ಫೀಸ್, ಚಪ್ಪಲಿ ಸ್ಟ್ಯಾಂಡ್ ಎಲ್ಲಾ ಕಡೆ ಹಣ ವಸೂಲಿ ಮಾಡುತ್ತಾರೆ. ಆದರೆ, ಸರಿಯಾದ ಭದ್ರತೆಯ ವ್ಯವಸ್ಥೆ ಇಲ್ಲ. ಅರಮನೆ ಉಪ ನಿರ್ದೇಶಕ ಏನು ಮಾಡುತ್ತಿದ್ದಾರೆ ಎಂದು ಹೆಚ್ ವಿಶ್ವನಾಥ್ ಪ್ರಶ್ನಿಸಿದರು.
Laxmi News 24×7