ಕೊಪ್ಪಳ: ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹಸುಗೂಸನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯಲಾಗಿದೆ.
ಕುಕನೂರ ತಾಲೂಕಿನ ಗುತ್ತೂರ ನಿವಾಸಿಗಳಾದ ಮಲ್ಲಪ್ಪ ವಿಜಯಲಕ್ಷ್ಮೀ ದಂಪತಿಗೆ ಹತ್ತು ಗಂಟೆಗಳ ಹಿಂದೆ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ನವಜಾತ ಶಿಶುವನ್ನು ಕರೆದುಕೊಂಡು ಬರಲಾಗಿತ್ತು. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ತಪಾಸಣೆ ಮಾಡಿದ ಬಳಿಕ ಮಗುವಿನ ಕರಳುಗಳು ಹೊರಗಡೆ ಬಂದಿರುವ ಕಾರಣ ಮಗುವಿಗೆ ಆಪರೇಷನ್ ಅವಶ್ಯಕತೆ ಇದೆ ಎಂದು ವೈದ್ಯರು ಹುಬ್ಬಳ್ಳಿಯ ಕಿಮ್ಸ್ಗೆ ರೆಫರ್ ಮಾಡಿದರು. ತಕ್ಷಣ ತಾಯಿ ಮಗು ಆಸ್ಪತ್ರೆಯಿಂದ ಐದು ಆಂಬ್ಯುಲೆನ್ಸ್ಗಳ ಮೂಲಕ ಹುಬ್ಬಳ್ಳಿಗೆ ಝಿರೋ ಟ್ರಾಫಿಕ್ನಲ್ಲಿ ಕರೆದೊಯ್ಯಲಾಯಿತು.![]()
ಸಂಬಂಧಿಕರ ಹೇಳಿಕೆ: ಶನಿವಾರ ತಡರಾತ್ರಿ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಮಗುವಿನ ಕರಳುಗಳೆಲ್ಲ ಹೊರಗೆ ಬಂದಿವೆ. ಅಲ್ಲದೆ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡಾ ಇದೆ. ಈ ಕಾರಣಕ್ಕೆ ಮಗು ಉಳಿಸಿಕೊಳ್ಳಲು ಕೊಪ್ಪಳ ವೈದ್ಯರು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಆಪರೇಷನ್ ಅವಶ್ಯವಿರುವ ಹಿನ್ನೆಲೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದರು. ಕೂಡಲೇ ಆಂಬ್ಯುಲೆನ್ಸ್ ಚಾಲಕರು ಐದು ಆಂಬುಲೆನ್ಸಗಳನ್ನು ರೆಡಿ ಮಾಡಿಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಈ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಕೊಪ್ಪಳದಿಂದ ಹುಬ್ಬಳ್ಳಿ ಸುಮಾರು 110 ಕಿಲೋ ಮೀಟರ್ ಇದೆ. ಅದಕ್ಕಾಗಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ ನವಜಾತ ಶಿಶುವನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ ಎಂದು ನವಜಾತ ಶಿಶುವಿನ ಸಂಬಂಧಿಕರು ಹೇಳಿದರು.
ಆಂಬ್ಯುಲೆನ್ಸ್ ಚಾಲಕನ ಪ್ರತಿಕ್ರಿಯೆ: “ಹುಬ್ಬಳ್ಳಿ KMC ಗೆ ರೆಫರ್ ಮಾಡಿದ್ದಾರೆ. ಮಗುವಿಗೆ ಕಿಡ್ನಿ ಸಮಸ್ಯೆ ಜತೆ, ಕರಳುಗಳು ಹೊರ ಬಂದಿವೆ. ಹಾಗಾಗಿ ತುರ್ತು ಇದೆ. ಇಂದು ಬೆಳಗ್ಗೆ 4.30ಕ್ಕೆ ಕರೆ ಬಂತು. ಹುಬ್ಬಳ್ಳಿ KMC ಗೆ ಮಗುವನ್ನು ಆಪರೇಷನ್ಗಾಗಿ ಶಿಪ್ಟ್ ಮಾಡಬೇಕು. ಆಂಬ್ಯುಲೆನ್ಸ್ ಎಲ್ಲ ರೆಡಿ ಇಟ್ಟುಕೊಂಡಿರಿ ಎಂದು ಸೂಚಿಸಿದ್ದರು. ಇದಕ್ಕಿಂತ ಮುಂಚೆ ಝೀರೋ ಟ್ರಾಫಿಕ್ ಮಾಡಿದ್ದೇವೆ. VIP ಇದ್ದಾಗಲೂ ಮಾಡಿದ್ದೇವೆ. ಸಾಮಾನ್ಯವಾಗಿ ಈ ತರಹದ್ದು ಪ್ರಕರಣಗಳಿದ್ದಾಗ ಮಾಡುತ್ತಿರುತ್ತೇವೆ. ಇದರಲ್ಲಿ ಚಾಲೆಂಜಿಗ್, ತಾಸು-ಗೀಸು ಇಲ್ಲ. ಎಷ್ಟು ಸಾಧ್ಯವಾಗುತ್ತೆ ಅಷ್ಟು ವೇಗವಾಗಿ ಮುಟ್ಟಿಸುವುದು ನಮ್ಮ ಕರ್ತವ್ಯ, ನಾವು ಮಾಡುತ್ತೇವೆ. ಇಲ್ಲಿಂದ 5-6 ಆಂಬ್ಯುಲೆನ್ಸ್ ಆಪರೇಟ್ ಆಗುತ್ತಿವೆ” ಎಂದು ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಕೊಪ್ಪಳದಿಂದ ಹೊರಡುವ ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದರು.
Laxmi News 24×7