ಬಂಟ್ವಾಳ (ದಕ್ಷಿಣಕನ್ನಡ): ಪಾಸ್ ಪೋರ್ಟ್ ಮಾಡಲು ಸುಳ್ಳು ದಾಖಲೆ ನೀಡಿದ ವ್ಯಕ್ತಿಗೆ ಸಹಕಾರ ನೀಡಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಹಾಗೂ ಪಾಸ್ ಪೋರ್ಟ್ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಪ್ರದೀಪ್ ಮತ್ತು ದಾಖಲೆ ಮಾಡಲು ಹೊರಟ ಶಕ್ತಿದಾಸ್ ಆರೋಪಿಗಳು. ಪ್ರದೀಪ್ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೇಲಧಿಕಾರಿಯಿಂ ಶಿಫಾರಸು ಮಾಡಿಸಿಕೊಟ್ಟಿರುವ ಆರೋಪ: ಇವರಲ್ಲಿ ಶಕ್ತಿದಾಸ್ ಯಾವ ಊರಿನವನು ಎಂಬ ಕುರಿತು ಸ್ಪಷ್ಟತೆ ಇಲ್ಲ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಶಕ್ತಿದಾಸ್, ಫೆಬ್ರವರಿ ತಿಂಗಳಲ್ಲಿ ಪಾಸ್ ಪೊರ್ಟ್ಗಾಗಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ಬಗ್ಗೆ ಪೊಲೀಸ್ ವೆರಿಫಿಕೇಶನ್ ಮಾಡುವ ವೇಳೆ ಅರ್ಜಿದಾರರ ವಿಳಾಸವು ದಾಖಲಾತಿಗಳಲ್ಲಿನ ವಿಳಾಸಕ್ಕೆ ತಾಳೆಯಾಗದಿರುವುದರಿಂದ ನಾ-ಶಿಫಾರಸು ಮಾಡಲಾಗಿತ್ತು. ಇದಾಗಿ ಜೂನ್ನಲ್ಲಿ ಶಕ್ತಿದಾಸ್, ಮತ್ತೆ ಮರು ಅರ್ಜಿಯನ್ನು ಸಲ್ಲಿಸಿದ್ದಾನೆ. ಅರ್ಜಿಯನ್ನು ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಯಾದ ಆರೋಪಿ ಪ್ರದೀಪ್ ಅರ್ಜಿದಾರರ ವಿಳಾಸವಿರುವ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಅರಿವಿಗೆ ಬಾರದಂತೆ, ಸಾಬು ಮಿರ್ಜಿ ಹೆಸರಿನಲ್ಲಿ ವರದಿ ತಯಾರಿಸಿ, ಸಹಿಯನ್ನು ಫೋರ್ಜರಿ ಮಾಡಿ, ಮೇಲಧಿಕಾರಿಯವರಿಂದ ಶಿಫಾರಸು ಮಾಡಿಸಿ ಕಳುಹಿಸಿ ಕೊಟ್ಟಿದ್ದಾಗಿ ಆರೋಪಿಸಲಾಗಿದೆ. ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದು ಎಂದು ನಾಶಪಡಿಸಿರುವುದಾಗಿ ಆರೋಪ ಕೇಳಿ ಬಂದಿದೆ.
ದಾಖಲೆಗಳ ಪರಿಶೀಲನೆ ವೇಳೆ ಬಯಲಿಗೆ ಬಂದ ಕೃತ್ಯ : ಡಿ.19ರಂದು ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದಿಂದ ನೀಡಲ್ಪಡುವ ಪ್ರಮುಖ ಗುರುತಿನ ಚೀಟಿ ಪಾಸ್ಪೋರ್ಟ್ ಆಗಿದ್ದು, ಇದನ್ನು ಅಪರಾಧಿಕ ನಂಬಿಕೆ ದ್ರೋಹ ಬಗೆದು ಪಾಸ್ ಪೋರ್ಟ್ ಹಾಗೂ ಪೊಲೀಸ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಿ ಕಡತವನ್ನು ನಾಶಪಡಿಸಿದ ಹಿನ್ನೆಲೆ ಪ್ರದೀಪ್ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದ ಶಕ್ತಿದಾಸ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲೀಗ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಫ್ಐಆರ್ ಆಧಾರದ ಮೇಲೆ ಆರೋಪಿ ಪ್ರದೀಪ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿತನಾದ ಶಕ್ತಿ ದಾಸ್ ಎಂಬಾತನು ಪೊಲೀಸ್ ವಶದಲ್ಲಿದ್ದು, ವಿಚಾರಣೆಯ ವೇಳೆ ತಾನು ಪಶ್ಚಿಮ ಬಂಗಾಳ ನಿವಾಸಿಯೆಂದು ತಿಳಿಸಿರುತ್ತಾನೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಮತ್ತೋರ್ವ ಆರೋಪಿತ ಪ್ರದೀಪ್ ಎಂಬಾತನನ್ನು ಇಲಾಖಾ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7