ಕಲಬುರಗಿ: ರಾಜ್ಯದಲ್ಲಿನ ನಾಯಕತ್ವ ಗೊಂದಲವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಹೈಕಮಾಂಡ್ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಹುದ್ದೆ ಕುರಿತ ಗೊಂದಲಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಮುಖಂಡ ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಪತ್ರ ಇನ್ನೂ ನಮ್ಮ ಕೈ ಸೇರಿಲ್ಲ. ದೆಹಲಿಗೆ ಹೋದ ಬಳಿಕ ಪತ್ರದ ವಿಷಯ ತಿಳಿಯಲಿದೆ. ಯಾವ ಉದ್ದೇಶಕ್ಕೆ ಪತ್ರ ಬರೆದಿದ್ದಾರೆ, ಪತ್ರದಲ್ಲಿ ಏನಿದೆ ಎಂಬುದನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ.
ಸುದರ್ಶನ್ ಅವರು ಏನು ಹೇಳಿದ್ದಾರೆ, ಏನು ಸಲಹೆ ನೀಡಿದ್ದಾರೆ ಎಂಬುದು ಪತ್ರ ನೋಡಿದ ನಂತರ ಗೊತ್ತಾಗಲಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಡಿಸೆಂಬರ್ 23ರಂದು ದೆಹಲಿಗೆ ಭೇಟಿ ನೀಡುವ ವಿಚಾರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯದಲ್ಲಿ ಗೊಂದಲ ಹೆಚ್ಚಾಗಿದೆ ಎಂದರೆ ಅದನ್ನು ಹೈಕಮಾಂಡ್ ಸೃಷ್ಟಿ ಮಾಡಿಲ್ಲ. ಲೋಕಲ್‌ನಲ್ಲಿ ಗೊಂದಲ ಸೃಷ್ಟಿ ಮಾಡಿಕೊಂಡಿದ್ದರೆ, ಅದನ್ನೂ ಲೋಕಲ್ ಲೀಡರ್‌ಗಳೇ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್, ಹೈಕಮಾಂಡ್ ಎಂದು ಹೇಳುತ್ತಾ ಹೋಗುವುದು ಸೂಕ್ತವಲ್ಲ ಎಂದು ತಿಳಿಸಿದರು.
ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತೆಂದು ಯಾರೂ ಹೇಳಬಾರದು. ಕಾರ್ಯಕರ್ತರ ಬೆಂಬಲದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಇವರು ಪಕ್ಷ ಕಟ್ಟಿದ್ದಾರೆ, ಅವರು ಪಕ್ಷ ಕಟ್ಟಿದ್ದಾರೆ ಎಂದು ಹೇಳಿಕೊಳ್ಳುವುದನ್ನು ಕಾರ್ಯಕರ್ತರು ಕೂಡ ಬಿಟ್ಟುಬಿಡಬೇಕು. ಪಕ್ಷ ಅಂದಮೇಲೆ ಎಲ್ಲರ ಪಾತ್ರವೂ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ತೆಗೆದುಹಾಕಿ ಹೊಸ ಯೋಜನೆ ತರಲು ಮುಂದಾಗಿರುವುದು ಬಡವರ ಮೇಲೆ ಕೊಡಲಿ ಪೆಟ್ಟು ನೀಡಿದಂತಾಗಿದೆ ಎಂದು ಇದೇ ವೇಳೆ ಖರ್ಗೆ ಟೀಕಿಸಿದರು.
Laxmi News 24×7