ರಾಯಚೂರು: ರಸ್ತೆ ಪಕ್ಕದಲ್ಲಿ ನಿಂತಿರುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ರಾಯಚೂರಿನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.
ನಗರದ ಹೊರವಲಯದ ಯರಮರಸ್ ಬಳಿಯ ಹೈದರಾಬಾದ್ – ರಾಯಚೂರು ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಯರಮರಸ್ ನಿವಾಸಿಗಳಾದ ಮಿಚ್ಚರ್ ನಾಗಪ್ಪ ಉಪ್ಪಾರ (65) ಹಾಗೂ ಅವರ ಮಗ ರಮೇಶ ಉಪ್ಪಾರ (36) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಹೊಲದ ಬಳಿ ತೆರಳಿದ್ದ ಇವರು, ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ವೇಗದೂತ ಲಾರಿಯು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತೀವ್ರ ಗಾಯಗೊಂಡ ನಾಗಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಮಗ ರಮೇಶ ಚಕ್ರಕ್ಕೆ ಸಿಲುಕಿದ್ದ. ಆತನನ್ನು ಲಾರಿಯು ಸುಮಾರು ದೂರದವರೆಗೆ ಎಳೆದೊಯ್ದಿದ್ದು, ದೇಹವು ಛಿದ್ರ, ಛಿದ್ರವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಘಟನೆ ಬೆನ್ನಲ್ಲೇ, ಚಾಲಕ ಸ್ಥಳದಲ್ಲಿಯೇ ಲಾರಿ ಬಿಟ್ಟು ಪರಾರಿಯಾಗಿದ್ದ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ, ಹೈದರಾಬಾದ್ – ರಾಯಚೂರು ಬೈಪಾಸ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.ವಿಷಯ ತಿಳಿದು, ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸದ್ಯ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿದ್ದ ಆರೋಪಿ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.
Laxmi News 24×7