ಬೆಂಗಳೂರು: ವಿಶ್ವಕಪ್ ವಿಜೇತ ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ, ಅಭಿನಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ರೂ. ನಗದು ಬಹುಮಾನದ ಜೊತೆಗೆ, ಸರ್ಕಾರಿ ಉದ್ಯೋಗ ಘೋಷಿಸಿದರು.
ಕಾವೇರಿ ನಿವಾಸದಲ್ಲಿ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರ್ತಿಯರನ್ನು ವೈಯಕ್ತಿಕವಾಗಿ ಅಭಿನಂದಿಸಿ, ಸನ್ಮಾನಿಸಿದ ಬಳಿಕ ಮುಖ್ಯಮಂತ್ರಿಗಳು ಈ ಮಹತ್ವದ ಘೋಷಣೆ ಮಾಡಿದರು. ಹಾಗೆಯೇ, ಭಾರತ ತಂಡವನ್ನು ಪ್ರತಿನಿಧಿಸಿದ ಇತರ ರಾಜ್ಯಗಳ ಆಟಗಾರ್ತಿಯರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದರು. ಹೀಗಾಗಿ, ಇತರ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ.
ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಸಿಎಂ ವಿಶೇಷವಾಗಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್ ಉಪಸ್ಥಿತರಿದ್ದರು.
Laxmi News 24×7