ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಮಂಗಳವಾರ ತಡರಾತ್ರಿಯ ಭೇಟಿ ರಾಜ್ಯ ಪವರ್ ಫೈಟ್ಗೆ ಮತ್ತಷ್ಟು ತಿರುವು ನೀಡಿದೆ.
ಖಾಸಗಿ ಹೊಟೇಲ್ನಲ್ಲಿ ಸತೀಶ್ ಜಾರಕಿಹೊಳಿ, ಡಿಕೆಶಿ ನಡುವೆ ಮಾತುಕತೆ ನಡೆದಿದೆ. ಸತೀಶ್ ಜಾರಕಿಹೊಳಿ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ನಡೆಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಸಿಎಂ ಅವರ ಮನವೊಲಿಸುವ ಜೊತೆಗೆ ತಮ್ಮ ಸಹಕಾರ ಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಂಡ್ ನಿರ್ಧರಿಸಿ ಸಿಎಂ ಸ್ಥಾನ ಕೊಟ್ಟರೆ ನೀವು ಬೆಂಬಲಿಸಬೇಕು. ನಿಮ್ಮ ಜೊತೆಗಿನ ವಿಶ್ವಾಸವನ್ನು ಹೀಗೇ ಮುಂದುವರೆಸುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ. ಈ ವೇಳೆ ಸತೀಶ್ ಜಾರಕಿಹೊಳಿ, ನಾವು ಸಿದ್ದರಾಮಯ್ಯನವರನ್ನು ಬಿಟ್ಟು ಬರಲು ಆಗಲ್ಲ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಅದಕ್ಕೆ ನಾವು ಬದ್ಧರು. ಹೈಕಮಾಂಡ್ ನಿರ್ಣಯ ಮಾಡಲಿ ನೋಡೋಣ. ನಾವಾಗಿಯೇ ಇವರನ್ನು ಮಾಡಿ, ಅವರನ್ನು ಮಾಡಿ ಎಂದು ಹೇಳುವುದು ಕಷ್ಟ ಎಂದು ಡಿಕೆಶಿಗೆ ಹೇಳಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ”ಪಕ್ಷದ ಅಧ್ಯಕ್ಷರು ಅನೇಕರ ಬಾರಿ ಭೇಟಿಯಾಗಿದ್ದೇವೆ. ಪಕ್ಷದ ಕಚೇರಿಯಲ್ಲೂ ಭೇಟಿಯಾಗಿದ್ದೆವು. ಅವರ ಮನೆಯಲ್ಲೂ ಭೇಟಿಯಾಗಿದ್ದೇವೆ. ಎಲ್ಲರೂ ಒಗ್ಗಟ್ಟನಿಂದ ಇರಬೇಕು, ಪಕ್ಷದಿಂದ ಒಗ್ಗಟ್ಟಿನಿಂದ ಇರುವುದು ಉದ್ದೇಶ. ಸಿಎಂ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಭೇಟಿ ವೇಳೆ ಪಕ್ಷ ಸಂಘಟನೆ, ಮುಂದಿನ ಎಲೆಕ್ಷನ್ ಬಗ್ಗೆ ಚರ್ಚೆ ಆಗಿದೆ. ಇನ್ನೂ ಸುಮಾರು ವಿಷಯಗಳು ಚರ್ಚೆ ಆಗಿವೆ. ಹೈಕಮಾಂಡ್ ಅಳೆದು ತೂಗಿ ನಿರ್ಧಾರ ಮಾಡ್ತಾರೆ. ಪಾರ್ಟಿ ಹೇಳಿದಂತೆ ನಾವು ಕೇಳ್ತೇವೆ. ಡಿಕೆಶಿ ಎಲ್ಲ ಸಚಿವರನ್ನು, ಶಾಸಕರನ್ನು ಭೇಟಿಯಾಗಿದ್ದಾರೆ” ಎಂದರು.
‘‘ಡಿ.ಕೆ.ಸುರೇಶ್ ಈ ಹಿಂದೆ ಭೇಟಿಯಾಗಿದ್ದರು. ನಾವು ಅವರ ಮನೆಗೆ ಹೋಗಿ ಬಂದಿದ್ದೇವೆ. ಅವರಿಗೆ ಆಸೆ ಇರುತ್ತದೆ, ಡೇ ಒನ್ನಿಂದ ಸಿಎಂ ಸ್ಥಾನ ಕ್ಲೇಮ್ ಮಾಡಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನ ಮಾಡಿದೆ. ಈಗಲೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಪರ ಇದೆಯಾ, ವಿರೋಧ ಇದೆಯಾ ಎಂದು ಹೈಕಮಾಂಡ್ ನೋಡಬೇಕು” ಎಂದು ಹೇಳಿದರು.
ಪರಮೇಶ್ವರ್ ಸಿಎಂ ಹುದ್ದೆಯನ್ನು ಕ್ಲೇಮ್ ಮಾಡಿರುವ ವಿಚಾರಕ್ಕೆ, ”ಕ್ಲೇಮ್ ಮಾಡುವುದರಲ್ಲಿ ತಪ್ಪೇನಿಲ್ಲ. ಅವರು ಎಂಟು ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.
ಮೂರನೇ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಸಾಧ್ಯತೆಯ ವಿಚಾರವಾಗಿ ಮಾತನಾಡಿ, ”ಅಂತಹ ಸನ್ನಿವೇಶ ಬಂದಿಲ್ಲ. ಸನ್ನಿವೇಶ ಬರದೆ ಕೋಟ್ ಹೊಲಿಸಿಕೊಂಡು, ಕೋಟ್ ಹಾಕಿಕೊಳ್ಳಲೂ ಆಗದೆ, ಬಿಚ್ಚಲೂ ಆಗದಂತೆ ಆಗಬಾರದು ಅಲ್ವಾ?. ಅದಕ್ಕೆ ಸನ್ನಿವೇಶ ಬಂದಿಲ್ಲ” ಎಂದು ಸೂಚ್ಯವಾಗಿ ಎಂದು ಹೇಳಿದರು.
Laxmi News 24×7