ಬೆಂಗಳೂರು: “ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಧ್ವನಿ ಎತ್ತುವುದೇ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೆದಿರುವ “ನೀರಿನ ಹೆಜ್ಜೆ: ವಿವಾದ-ಒಪ್ಪಂದ-ತೀರ್ಪು” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. “ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿ ತಮ್ಮ ಅನುಭವ ಮತ್ತು ಗ್ರಹಿಕೆಯನ್ನು ಹಾಗೂ ನೀರಿನ ಮಹತ್ವವನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ನದಿ ವಿವಾದಗಳ ಆಳ ಅಗಲವನ್ನು ಜನರಿಗೆ ತಿಳಿಸುವ ಕೆಲಸವನ್ನು ನೀರಿನ ಹೆಜ್ಜೆ ಜನರಿಗೆ ತಿಳಿಸಲಿದೆ. ನಾನು ಪುಸ್ತಕವನ್ನು ಪೂರ್ತಿ ಓದುವೆ” ಎಂದು ತಿಳಿಸಿದರು.
ಮುಂದುವರೆದ ಸಿಎಂ, “ಮಹದಾಯಿ, ಕೃಷ್ಣ ಮತ್ತು ಕಾವೇರಿ ಸೇರಿ ಅಂತಾರಾಜ್ಯ ಜಲ ವಿವಾದಗಳು ಇನ್ನೂ ಜೀವಂತವಾಗಿದ್ದು, ರಾಜ್ಯಕ್ಕೆ ಪೂರ್ತಿ ಅನುಕೂಲಕರವಾದ ನ್ಯಾಯಬದ್ಧ ತೀರ್ಮಾನಗಳು ಇನ್ನೂ ಆಗಬೇಕಿದೆ. ಮೇಕೆದಾಟಿನಲ್ಲಿ 67 ಟಿಎಂಸಿ ನೀರನ್ನು ಶೇಖರಣೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನಮಗಿಂತ ಹೆಚ್ಚು ತಮಿಳುನಾಡಿಗೇ ಅನುಕೂಲ. ಆದರೂ ಅವರು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಇದನ್ನು ನಾವು ವಿರೋಧಿಸಿ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆಗೆ ಹಲವು ಟೀಕೆಗಳು ಬಂದರೂ ನಾವು ಎದೆಗುಂದದೆ ಪಾದಯಾತ್ರೆ ಯಶಸ್ವಿಗೊಳಿಸಿದೆವು” ಎಂದು ವಿವರಿಸಿದರು.
“ಮತ್ತೊಂದು ಕಡೆ ಕೃಷ್ಣ ನದಿ ನೀರಿನ ವಿವಾದದಲ್ಲೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಲೀ, ಬಿಜೆಪಿ ಪಕ್ಷವಾಗಲೀ ಈ ಪಕ್ಷಗಳ ಸಂಸದರಾಗಲೀ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯಾಗಲೀ, ಆರ್ಥಿಕವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹದ ಬಗ್ಗೆಯೂ ಮಾತಾಡುವುದಿಲ್ಲ” ಎಂದು ಟೀಕಿಸಿದರು.”ಇಷ್ಟು ಮಾತ್ರವಲ್ಲದೆ ಕಬ್ಬು ಬೆಳಗಾರರಿಗೆ ದ್ರೋಹ ಬಗೆದಿರುವುದೂ ಕೇಂದ್ರ ಸರ್ಕಾರ. ಈ ಬಗ್ಗೆಯೂ ಕೂಡ ಬಿಜೆಪಿ, ಜೆಡಿಎಸ್ ಸಂಸದರು ಬಾಯಿ ಬಿಡುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಅವರು, ರಾಜ್ಯದಲ್ಲಿ 2028ರಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುವುದು ಶತಸಿದ್ಧ” ಎಂದು ಭವಿಷ್ಯ ನುಡಿದರು.
Laxmi News 24×7