ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚುವರಿ ದರ ನೀಡಲು ಆದೇಶಿಸಿದೆ. ಸಕ್ಕರೆ ಇಳುವರಿ ಪ್ರಮಾಣದ ಮೇಲೆ ಕೇಂದ್ರ ಎಫ್ಆರ್ಪಿ ಬೆಲೆ ನಿಗದಿಗೊಳಿಸಿದೆ. 2024-25 ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿ (ರಿಕವರಿ) ಆಧಾರದಲ್ಲಿ 2025-26 ಸಾಲಿನಲ್ಲಿ ಪಾವತಿಸಬೇಕಾದ ಎಫ್ಆರ್ಪಿ ಬೆಲೆ ನಿಗದಿ ಮಾಡಲಾಗಿದೆ. 81 ಸಕ್ಕರೆ ಕಾರ್ಖಾನೆಗಳ ಇಳುವರಿ ಪ್ರಮಾಣ, ಸಾಗಾಟ ಮತ್ತು ಕಟಾವು ವೆಚ್ಚದ ಮಾರ್ಗಸೂಚಿಯ ಸಮಗ್ರ ವರದಿ ಇಲ್ಲಿದೆ.
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ದೊಡ್ಡ ಸದ್ದು ಮಾಡುತ್ತಿದೆ. ಕಬ್ಬು ರೈತರ ಒಗ್ಗಟ್ಟಿನ ಹೋರಾಟಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಕಬ್ಬು ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದಂತೆ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿ ಆದೇಶ ಹೊರಡಿಸಿದೆ. ಸಕ್ಕರೆ ಕಾರ್ಖಾನೆಗಳು ಈಗಾಗಲೇ ಒಪ್ಪಿದ ಬೆಲೆಯ ಮೇಲೆ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚುವರಿ ಕೊಡಲು ತೀರ್ಮಾನಿಸಲಾಗಿದೆ. ಇದರಿಂದ ಬೆಳಗಾವಿ ಭಾಗದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರೆ, ಬಾಗಲಕೋಟೆ ಜಿಲ್ಲೆಯ ರೈತರು ಪ್ರತಿ ಟನ್ 3,500 ರೂ. ಬೆಲೆ ನಿಗದಿಗೊಳಿಸುವಂತೆ ಪಟ್ಟು ಹಿಡಿದು, ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
ಇತ್ತ ಒಂದಷ್ಟು ರೈತರು ಸರ್ಕಾರ ಹೆಚ್ಚುವರಿ 100 ರೂ. ಬೆಲೆಗೆ ತೃಪ್ತರಾಗಿಲ್ಲ, ಅತ್ತ ಕೆಲ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ದರ ನೀಡಲು ಒಪ್ಪುತ್ತಿಲ್ಲ. ಸಕ್ಕರೆ ಇಳುವರಿ ಆಧಾರದಲ್ಲಿ ಕಬ್ಬಿನ ಬೆಲೆ ನಿಗದಿಗೊಳಿಸಲಾಗುತ್ತದೆ. ಅದರಂತೆ ಕೇಂದ್ರ ಸರ್ಕಾರ 10.25% ಇಳುವರಿ ದರಕ್ಕೆ ಪ್ರತಿ ಟನ್ ಕಬ್ಬಿಗೆ 3,550 ರೂ. ಎಫ್ಆರ್ಪಿ ದರ ನಿಗದಿಗೊಳಿಸಿದೆ. ಈ ಎಫ್ಆರ್ಪಿ ದರದಲ್ಲಿ ಸಾಗಾಟ ಹಾಗೂ ಕಟಾವು ವೆಚ್ಚ ಒಳಗೊಂಡಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು 10.25% ಇಳುವರಿ ದರಕ್ಕೆ ಸಾಗಾಟ ಮತ್ತು ಕಟಾವು ವೆಚ್ಚ ಬಿಟ್ಟು 3,200 ರೂ. ರೈತರಿಗೆ ಪಾವತಿಸಲು ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದರು. ಇದಕ್ಕೆ ಮಣಿದ ರಾಜ್ಯ ಸರ್ಕಾರ ತಲಾ 50 ರೂ.ರಂತೆ ಕಾರ್ಖಾನೆ ಹಾಗೂ ಸರ್ಕಾರದಿಂದ ಪ್ರತಿ ಟನ್‌ಗೆ 100 ರೂ. ಹೆಚ್ಚುವರಿ ಬೆಲೆ ನಿಗದಿಗೊಳಿಸಿ ಆದೇಶಿಸಿದೆ.
ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್ಆರ್ಪಿ ದರ ಎಷ್ಟಿದೆ? ಕೇಂದ್ರ ಸರ್ಕಾರ 10.25% ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,550 ರೂ. ನಿಗದಿಗೊಳಿಸಿದೆ. 10.25% ಕ್ಕೆ ಮೇಲ್ಪಟ್ಟು ಇಳುವರಿಗೆ ನಂತರದ ಶೇ.1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್‌ಗೆ 346 ರೂ. ನಂತೆ ಹೆಚ್ಚುವರಿ ಬೆಲೆ ನಿಗದಿ ಮಾಡಿದೆ. ಇನ್ನು ಶೇ.10.25 ಕ್ಕಿಂತ ಕಡಿಮೆ ಹಾಗೂ ಶೇ.9.5ಕ್ಕೆ ಮೇಲ್ಪಟ್ಟ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಶೇ.1 ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್‌ಗೆ 346 ರೂ. ಸರಾಸರಿಯಂತೆ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು (Fair and Remunerative Price) ಕಡಿಮೆ ಮಾಡಲು ಮತ್ತು ಶೇ. 9.50 ಅಥವಾ 9.50ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಕಾರ್ಖಾನೆಗಳಿಗೆ ಪ್ರತಿ ಮಟ್ರಿಕ್ ಟನ್‌ಗೆ 3290.5 ರೂ. ಗಳ ಎಫ್ಆರ್ ಪಿ ಬೆಲೆ ನಿಗದಿ ಮಾಡಿದೆ.
ಅದರನ್ವಯ 15.9.2025 ರಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು 2024-25ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಂಡು 2025-26ನೇ ಸಾಲಿಗೆ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) (ತಿದ್ದುಪಡಿ) ಅಧಿನಿಯಮ 2014ರ ಕಲಂ 90ರ ಪ್ರಕಾರ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಅದರಂತೆ ರಾಜ್ಯದ ಸುಮಾರು 27 ಸಕ್ಕರೆ ಕಾರ್ಖಾನೆಗಳ ಸಕ್ಕರೆ ಇಳುವರಿ 11%ಗೂ ಅಧಿಕವಿದೆ. ಈ ಅಂಕಿಅಂಶವನ್ನು ಅಧಿಕಾರಿಗಳು ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ಮುಂದೆ ಮಂಡಿಸಿದ್ದರು. ಅದರಲ್ಲಿ ಸಕ್ಕರೆ ಕಾರ್ಖಾನೆಗಳ ಶೇಕಡವಾರು ಇಳುವರಿ ದರ ಹಾಗೂ ಅದಕ್ಕನುಗುಣವಾಗಿ ರೈತರಿಗೆ ಪಾವತಿಸಬೇಕಾದ ಎಫ್ಆರ್ಪಿ ಬೆಲೆಯನ್ನು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತರು ನಿಗದಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ: ಇಲ್ಲಿ ಒಟ್ಟು 29 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು ನಿಗದಿ ಮಾಡಿದಂತೆ 22 ಸಕ್ಕರೆ ಕಾರ್ಖಾನೆಗಳ ಸಕ್ಕರೆ ಇಳುವರಿ (ರಿಕವರಿ ರೇಟ್) 11% ದಿಂದ 12% ವ್ಯಾಪ್ತಿಯಲ್ಲಿದೆ. ಅಂದರೆ ಬಹುತೇಕ ಕಡೆ ಹೆಚ್ಚಿನ ಇಳುವರಿ ದರ ಇದೆ. ಇನ್ನು 7 ಸಕ್ಕರೆ ಕಾರ್ಖಾನೆಗಳಲ್ಲಿನ ಸಕ್ಕರೆ ಇಳುವರಿ 10.40% ಗಿಂತ ಹೆಚ್ಚಿಗೆ ಇದೆ.
ಸಭೆಯಲ್ಲಿ ಅಧಿಕಾರಿಗಳು ಮಂಡಿಸಿದ ದಾಖಲೆ ಲಭ್ಯವಾಗಿದ್ದು, ಅದರಂತೆ ಪ್ರಮುಖವಾಗಿ ಅರಿಹಂತ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿನ ಇಳುವರಿ ದರ 11.77% ಇದ್ದು, 2025-26 ಸಾಲಿಗೆ ಪ್ರತಿ ಟನ್‌ಗೆ 4,076 ರೂ.ನಂತೆ ರೈತರಿಗೆ ಎಫ್ಆರ್ಪಿ ಪಾವತಿಸಬೇಕಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸರಾಸರಿ 11.31% ಇಳುವರಿ ದರ ಇದೆ.
ಇತ್ತ ಅಥಣಿ ಶುಗರ್ಸ್ನಲ್ಲಿ 10.85% ಇಳುವರಿ ದರ ಇದ್ದು, ಪ್ರತಿ ಟನ್ ಕಬ್ಬಿಗೆ 3,758 ರೂ. ಎಫ್ಆರ್ಪಿ ಬೆಲೆ ಪಾವತಿಸಬೇಕಾಗಿದೆ. ಬೆಳಗಾಂ ಶುಗರ್ಸ್ನಲ್ಲಿ 11.80% ಇಳುವರಿ ದರ, 4,086 ರೂ. ಎಫ್ಆರ್ಪಿ ಬೆಲೆ, ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 11.46% ಇಳುವರಿ ದರ, 3,969 ಎಫ್ಆರ್ಪಿ ಬೆಲೆ, ಇಐಡಿ ಪ್ಯಾರಿ ಕಾರ್ಖಾನೆಯಲ್ಲಿ 11.93% ಇಳುವರಿ ದರ, 4,131 ರೂ. ಎಫ್ಆರ್ಪಿ ಬೆಲೆ ಪಾವತಿಸಬೇಕಾಗಿದೆ. ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 11.04% ರಿಕವರಿ ದರ ಇದ್ದು, ಪ್ರತಿ ಟನ್‌ಗೆ 3,823 ರೂ. ಎಫ್ಆರ್ಪಿ ಬೆಲೆ ನಿಗದಿಯಾಗಿದೆ.
ಗೋಕಾಕ್ ಶುಗರ್ಸ್ (11.38%) ಎಫ್ಆರ್ಪಿ ಬೆಲೆ 3,941 ರೂ., ಹಾಲಸಿದ್ದನಾಥ ಸಹಕಾರಿ ಕಾರ್ಖಾನೆ (11.43%) ಎಫ್ಆರ್ಪಿ ಬೆಲೆ 3,958 ರೂ., ಹರ್ಷ ಶುಗರ್ಸ್ (11.22%) ಎಫ್ಆರ್ಪಿ ಬೆಲೆ 3,886 ರೂ., ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ (10.82%) ಎಫ್ಆರ್ಪಿ ಬೆಲೆ 3,747 ರೂ., ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ (11.05%) ಎಫ್ಆರ್ಪಿ ಬೆಲೆ 3,827 ರೂ., ಲೈಲಾ ಶುಗರ್ಸ್ (11.05%) ಎಫ್ಆರ್ಪಿ ಬೆಲೆ 3,827 ರೂ., ಮಲಪ್ರಭಾ ಸಹಕಾರಿ ಸಕ್ಕರೆ ಮಿಲ್ (11.10%) ಎಫ್ಆರ್ಪಿ ಬೆಲೆ 3,844 ರೂ., ರೇಣುಕಾ ಶುಗರ್ಸ್ (10.72%) ಎಫ್ಆರ್ಪಿ ಬೆಲೆ 3,713 ರೂ., ರೇಣುಕಾ ಶುಗರ್ಸ್ ಅಥಣಿ (11.02%) ಎಫ್ಆರ್ಪಿ ಬೆಲೆ 3,816 ರೂ., ರೇಣುಕಾ ಶುಗರ್ಸ್ ಸವದತ್ತಿ (11.55%) ಎಫ್ಆರ್ಪಿ ಬೆಲೆ 4,000 ರೂ. ಪಾವತಿಸಬೇಕಾಗಿದೆ.
ಸತೀಶ್ ಶುಗರ್ಸ್ (11.65%) ಎಫ್ಆರ್ಪಿ ಬೆಲೆ 4,034 ರೂ., ಸಂಗಮ ಸಹಕಾರಿ ಸಕ್ಕರೆ (12.10%) ಎಫ್ಆರ್ಪಿ ಬೆಲೆ 4,188 ರೂ., ಶಿರಗುಪ್ಪಿ ಶುಗರ್ಸ್ ವರ್ಕ್ಸ್ (11.96%) ಎಫ್ಆರ್ಪಿ ಬೆಲೆ 4,142 ರೂ., ಶಿವಶಕ್ತಿ ಶುಗರ್ಸ್ ಲಿ. (11.08%) ಎಫ್ಆರ್ಪಿ ಬೆಲೆ 3,837 ರೂ., ಶಿವಸಾಗರ ಶುಗರ್ ಅಂಡ್ ಆಗ್ರೋ ಪ್ರಾಡಕ್ಟ್ (10.90%) ಎಫ್ಆರ್ಪಿ ಬೆಲೆ 3,775 ರೂ., ಸೋಮೇಶ್ವರ ಸಹಕಾರಿ ಸಕ್ಕರೆ (12.53%) ಎಫ್ಆರ್ಪಿ ಬೆಲೆ 4,339 ರೂ., ಸೌಭಾಗ್ಯಲಕ್ಷ್ಮಿ ಶುಗರ್ಸ್ (10.42%) ಎಫ್ಆರ್ಪಿ ಬೆಲೆ 3,609 ರೂ., ಬಸವೇಶ್ವರ ಶುಗರ್ಸ್ (11.07%) ಎಫ್ಆರ್ಪಿ ಬೆಲೆ 3,834 ರೂ., ಉಗಾರ್ ಶುಗರ್ಸ್ (10.75%) ಎಫ್ಆರ್ಪಿ ಬೆಲೆ 3,723 ರೂ., ವೆಂಕಟೇಶ್ವರ ಪವರ್ ವರ್ಕ್ಸ್ (12%) ಎಫ್ಆರ್ಪಿ ಬೆಲೆ 4,156 ರೂ., ವಿಶ್ವರಾಜ್ ಶುಗರ್ಸ್ (11.54%) ಎಫ್ಆರ್ಪಿ ಬೆಲೆ 3,996 ರೂ., ಇಂಡಿಯನ್ ಕೇನ್ ಪವರ್ ಲಿ. (10.41%) ಎಫ್ಆರ್ಪಿ ಬೆಲೆ 3,605 ರೂ. ಮತ್ತು ಇನಾಂದಾರ್ ಶುಗರ್ಸ್ (11.46%) ಪ್ರತಿ ಟನ್ 3,969 ರೂ.ರಂತೆ ಎಫ್ಆರ್ಪಿ ಬೆಲೆ ರೈತರಿಗೆ ಪಾವತಿಸಬೇಕಾಗಿದೆ.
ಬಾಗಲಕೋಟೆ ಜಿಲ್ಲೆ: ಇಲ್ಲಿ ಒಟ್ಟು 14 ಸಕ್ಕರೆ ಕಾರ್ಖಾನೆಗಳ ಪೈಕಿ 3 ಸಕ್ಕರೆ ಕಾರ್ಖಾನೆಗಳಲ್ಲಿನ ಇಳುವರಿ ದರ 11%ಗಿಂತ ಹೆಚ್ಚಿದ್ದರೆ, ಉಳಿದ ಸಕ್ಕರೆ ಕಾರ್ಖಾನೆಗಳಲ್ಲಿನ ಇಳುವರಿ ದರ 10.40% ಗಿಂತ ಹೆಚ್ಚಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸರಾಸರಿ 10.90% ಇಳುವರಿ ದರ ಇದೆ. ನಿರಾಣಿ ಶುಗರ್ಸ್ (10.98) ಎಫ್ಆರ್ಪಿ ಬೆಲೆ ಪ್ರತಿ ಟನ್ 3,803 ರೂ., ಬೀಳಗಿ ಶುಗರ್ ಮಿಲ್ (10.42%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,609 ರೂ., ಇಇಡಿ ಪ್ಯಾರಿ (11.87%) ಎಫ್ಆರ್ಪಿ ಬೆಲೆ ಪ್ರತಿ ಟನ್ 4,111 ರೂ., ಜೆಮ್ ಶುಗರ್ಸ್ (10.85%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,758 ರೂ., ಗೋದಾವರಿ ಬಯೋರಿಫೈನರೀಸ್ (10.91%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,778 ರೂ. ನಂತೆ ರೈತರಿಗೆ ಪಾವತಿಸಬೇಕಾಗಿದೆ.
ಇಂಡಿಯನ್ ಕೇನ್ ಪವರ್ (10.73%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,716 ರೂ., ಜಮಖಂಡಿ ಶುಗರ್ಸ್ (10.78%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,733 ರೂ., ಮೆಲ್ಬ್ರೊ ಶುಗರ್ಸ್ (10.57%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,661 ರೂ., ರಾಣಿ ಶುಗರ್ಸ್ (11%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,810 ರೂ., ನಿರಾಣಿ ಶುಗರ್ಸ್ ಮುದೋಳ (10.90%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,775 ರೂ., ಪ್ರಭುಲಿಂಗೇಶ್ವರ ಶುಗರ್ಸ್ (10.74%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,720 ರೂ., ನಿರಾಣಿ ಶುಗರ್ಸ್ ಬಾದಾಮಿ (10.88%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,768 ರೂ., ನಿರಾಣಿ ಶುಗರ್ಸ್ ಜಮಖಂಡಿ (10.92%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,782 ರೂ., ಬೀಳಗಿ ಶುಗರ್ ಮಿಲ್ (11.02%) ಎಫ್ಆರ್ಪಿ ಬೆಲೆ ಪ್ರತಿ ಟನ್ 3,816 ರೂ. ನಿಗದಿಗೊಳಿಸಲಾಗಿದೆ.
ವಿಜಯಪುರ ಜಿಲ್ಲೆ: ಇಲ್ಲಿರುವ 10 ಸಕ್ಕರೆ ಕಾರ್ಖಾನೆಗಳ ಪೈಕಿ 4 ಕಾರ್ಖಾನೆಗಳ ಇಳುವರಿ ದರ 10.40%-11% ವ್ಯಾಪ್ತಿಯಲ್ಲಿ ನಿಗದಿ ಮಾಡಲಾಗಿದೆ. ಅದೇ ರೀತಿ ಆರು ಕಾರ್ಖಾನೆಗಳಲ್ಲಿ ಇಳುವರಿ ದರ 8.86%- 9.86% ವ್ಯಾಪ್ತಿಯಲ್ಲಿ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 9.96% ಇಳುವರಿ ದರ ಇದೆ.
ಬೀದರ್ ಜಿಲ್ಲೆ: ಇಲ್ಲಿ ಐದು ಸಕ್ಕರೆ ಕಾರ್ಖಾನೆಗಳಿಗೆ ಕನಿಷ್ಠ 8.69% ದಿಂದ ಗರಿಷ್ಠ 10.20% ವ್ಯಾಪ್ತಿಯಲ್ಲಿ ಇಳುವರಿ ದರ ನಿಗದಿಗೊಳಿಸಿ ಅದರನ್ವಯ ಎಫ್ಆರ್ಪಿ ಬೆಲೆ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 9.60% ಇಳುವರಿ ದರ ಇದೆ.
ಹಾವೇರಿ ಜಿಲ್ಲೆ: ಇಲ್ಲಿ 3 ಸಕ್ಕರೆ ಕಾರ್ಖಾನೆಗಳಿಗೆ ಕನಿಷ್ಠ 9.40% ರಿಂದ ಗರಿಷ್ಠ 9.51% ವ್ಯಾಪ್ತಿಯಲ್ಲಿ ಇಳುವರಿ ದರ ನಿಗದಿ ಮಾಡಲಾಗಿದೆ. ಸರಾಸರಿ 9.46% ಇಳುವರಿ ದರ ಇದೆ.
ಕಲಬುರಗಿ ಜಿಲ್ಲೆ: ಇಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳಲ್ಲಿ ಕನಿಷ್ಠ 8.80% ದಿಂದ ಗರಿಷ್ಠ 10.15% ವ್ಯಾಪ್ತಿಯಲ್ಲಿ ಇಳುವರಿ ದರ ನಿಗದಿ ಮಾಡಲಾಗಿದೆ. ಸರಾಸರಿ 9.77% ಇಳುವರಿ ದರ ಇದೆ.
ಮಂಡ್ಯ ಜಿಲ್ಲೆ: ಇಲ್ಲಿರುವ 5 ಸಕ್ಕರೆ ಕಾರ್ಖಾನೆಗಳಲ್ಲಿ ಕನಿಷ್ಠ 6.35% ರಿಂದ 9.22% ವ್ಯಾಪ್ತಿಯಲ್ಲಿ ಇಳುವರಿ ದರ ನಿಗದಿ ಮಾಡಲಾಗಿದೆ. ಸರಾಸರಿ 8.51% ಇಳುವರಿ ದರ ಇದೆ.
ಉಳಿದಂತೆ ಗದಗ ಜಿಲ್ಲೆ ಸರಾಸರಿ 9.61%, ದಾವಣಗೆರೆ ಸರಾಸರಿ 8.87%, ಬಳ್ಳಾರಿ ಸರಾಸರಿ 9.20%, ಚಾಮರಾಜನಗರ ಸರಾಸರಿ 8.95%, ಹಾಸನ ಸರಾಸರಿ 9.29%, ಮೈಸೂರು ಸರಾಸರಿ 9.03%, ಉತ್ತರ ಕನ್ನಡ ಸರಾಸರಿ 11.55%, ವಿಜಯನಗರ ಸರಾಸರಿ 8.89%, ಯಾದಗಿರಿ ಸರಾಸರಿ 9.92% ಇಳುವರಿ ದರ ಇದೆ.
ಕಬ್ಬು ಕಟಾವು/ ಸಾಗಾಟ ವೆಚ್ಚ ಮಾರ್ಗಸೂಚಿ ಏನು?: 2025-26 ಸಾಲಿನಲ್ಲಿ ಪ್ರಾದೇಶಿಕ ಕಬ್ಬು ಕಟಾವು ಗ್ಯಾಂಗ್ ಗಳಿಗೆ ಪ್ರತಿ ಟನ್‌ಗೆ 439 ರೂ. ಪರಿಷ್ಕೃತ ಕಟಾವು ವೆಚ್ಚ ನಿಗದಿ ಮಾಡಲಾಗಿದೆ. ಹೊರ ಪ್ರದೇಶದ ಕಬ್ಬು ಕಟಾವು ಗ್ಯಾಂಗ್ ಗಳಿಗೆ ಪ್ರತಿ ಟನ್‌ಗೆ 514 ರೂ., ಎತ್ತಿನ ಗಾಡಿ ಗ್ಯಾಂಗುಗಳಿಗೆ ಪ್ರತಿ ಟನ್ ಕಬ್ಬಿಗೆ 432 ರೂ. ಕಟಾವು ವೆಚ್ಚ ನಿಗದಿ ಮಾಡಲಾಗಿದೆ.
ಅದೇ ರೀತಿ ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ 1 ರಿಂದ 50 ಕಿ.ಮೀ. ವರೆಗೆ ಸಾಗಾಣಿಕೆ ವೆಚ್ಚವನ್ನು ಅಳವಡಿಸಲಾಗಿದೆ. ಪ್ರತಿ ಕಾರ್ಖಾನೆ ತಮ್ಮ ವ್ಯಾಪ್ತಿಯ 15 ರಿಂದ 20 ಕಿ.ಮೀ ಒಳಗಡೆ ಶೇ.70%ರಷ್ಟು, 20 ರಿಂದ 40 ಕಿ.ಮೀ ಒಳಗಡೆ ಶೇ.20%ರಷ್ಟು ಮತ್ತು 40 ಕಿ.ಮೀ ಮೇಲ್ಪಟ್ಟ ಪ್ರದೇಶದಿಂದ ಉಳಿಕೆ ಕಬ್ಬುನ್ನು ಕಾರ್ಖಾನೆಗಳು ತರಬಹುದೆಂದು ಅಂದಾಜಿಸಿ ಸಾಗಾಣಿಕಾ ದರಗಳನ್ನು ಪರಿಷ್ಕರಿಸಲಾಗಿದೆ. ಅದರಂತೆ 1-15 ಕಿ.ಮೀ 273 ರೂ., 15.1-20 ಕಿ.ಮೀ 297 ರೂ., 20.1-25 ಕಿ.ಮೀ 324 ರೂ., 25.1-30 ಕಿ.ಮೀ 348 ರೂ., 30.1-35 ಕಿ.ಮೀ 374 ರೂ., 35.1-40 ಕಿ.ಮೀ 389 ರೂ., 40.1-45 ಕಿ.ಮೀ 405 ರೂ., 45.1-50 ಕಿ.ಮೀ 421 ರೂ. ಸಾಗಾಟ ದರ ನಿಗದಿ ಮಾಡಲಾಗಿದೆ.
1 ಟನ್ ಕಬ್ಬು ನುರಿಸಲು ತಗುಲುವ ವೆಚ್ಚ ಎಷ್ಟು? ಒಂದು ವೇಳೆ (11% ರಿಕವರಿ ದರ) ಕಬ್ಬಿಗೆ ಪ್ರತಿ ಟನ್ 3,200 ರೂ. ನಂತೆ ರೈತರಿಗೆ ಪಾವತಿ ಮಾಡಿದರೆ, ಅದಕ್ಕೆ ಕಟಾವು ಹಾಗೂ ಸಾಗಾಟ ವೆಚ್ಚವಾಗಿ ಪ್ರತಿ ಟನ್‌ಗೆ 900 ರೂ. ತಗುಲುತ್ತದೆ. ಆಡಳಿತಾತ್ಮಕ ವೆಚ್ಚವಾಗಿ ಪ್ರತಿ ಟನ್‌ಗೆ 300 ರೂ., ಕನ್ವರ್ಷನ್ ವೆಚ್ಚವಾಗಿ ಪ್ರತಿ ಟನ್ 400 ರೂ. ಹಾಗೂ ಬಗಸ್ಸೆ ವೆಚ್ಚ (150 ಕೆ.ಜಿ×2.5) 375 ರೂ. ಆಗಲಿದ್ದು, ಒಂದು ಟನ್ ಕಬ್ಬು ನುರಿಸಿ ಸಂಸ್ಕರಿಸಲು 5,175 ರೂ. ವೆಚ್ಚ ತಗುಲುತ್ತದೆ ಎಂದು ಸರ್ಕಾರ ಅಂದಾಜು ಮಾಡಿದೆ.
ಸರ್ಕಾರ ಅಂದಾಜಿಸಿದಂತೆ 11% ರಿಕವರಿ ದರ ಇರುವ 1 ಟನ್ ಕಬ್ಬು ನುರಿಸುವುದರಿಂದ ಒಟ್ಟು ಆದಾಯ 5,404 ರೂ. ಬರುತ್ತದೆ. ಇದರಲ್ಲಿ 3,200 ರೂ.ರಂತೆ ರೈತರಿಗೆ ಪಾವತಿಸಿದರೆ, 5,175 ರೂ. ವೆಚ್ಚ ತಗುಲುತ್ತದೆ. ಈ ವೆಚ್ಚವನ್ನು ಕಳೆದರೆ 229 ರೂ. ನಿವ್ವಳ ಲಾಭವಾಗುತ್ತದೆ. ಅದೇ ರೀತಿ 11.50% ರಿಕವರಿ ದರದಡಿ ಒಂದು ಟನ್ ಕಬ್ಬು ನುರಿಸಿದರೆ ವೆಚ್ಚ ಕಡಿತ ಮಾಡಿ ಅಂದಾಜು 419 ರೂ. ನಿವ್ವಳ ಲಾಭ ಬರುತ್ತದೆ.
Laxmi News 24×7